35 ವರ್ಷದ ಹಿಂದೆ ಆರಂಭವಾದ ರಾಷ್ಟ್ರೀಯ ಬಸವದಳ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಬಸವ ಧರ್ಮಪೀಠದ ಮಾತೆ ಗಂಗಾದೇವಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಆರಂಭವಾದ 39ನೇ ಶರಣ ಮೇಳದ ಮೊದಲ ದಿನದ ರಾಷ್ಟ್ರೀಯ ಬಸವ ದಳದ 35ನೇ ಅಧಿವೇಶನ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಚಿಂತನೆಗೋಷ್ಟಿ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
“ರಾಷ್ಟ್ರೀಯ ಬಸವದಳ ಕಾರ್ಯನಿರ್ವಹಣೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ದೇಶದ 10 ರಾಜ್ಯಗಳಲ್ಲಿ ಸಂಘಟನೆ ಹೊಂದಿದ್ದು, ಇನ್ನಷ್ಟು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದೆ” ಎಂದರು.
ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಮಾತನಾಡಿ, “ಈ ವರ್ಷ 12 ಜಿಲ್ಲೆಗಳಲ್ಲಿ ನಾನು ಲಿಂಗಾಯತ ಅಭಿಯಾನ ಮಾಡುವ ಮೂಲಕ ಲಿಂಗಾಯತ ಧರ್ಮ ಸಂಘಟನೆ, ಜಾಗೃತಿ ಮಾಡಲಾಗುವುದು. ಅಭಿಯಾನದಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆ ಕುರಿತು ಚರ್ಚಿಸಲಾಗುವುದು. ಕಳೆದ ವರ್ಷ ಆರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಬಸವ ದಳದ ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಿದರಿನ ಬಸವ ಗಿರಿಯ ಪ್ರಭುದೇವ ಸ್ವಾಮೀಜಿ ಮಾತನಾಡಿ, “ಶರಣ ಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು ಸದ್ಗುಣ ಮೂಡಿಸುತ್ತಿವೆ. ತಾತ್ವಿಕ ಚರಿತ್ರೆ ಹೊಂದಿದ ಲಿಂಗಾಯತ ಧರ್ಮಕ್ಕೆ ಸಾಮಾಜಿಕ ಮಾನ್ಯತೆ ಅಗತ್ಯವಿದೆ. ವಚನ ಸಾಹಿತ್ಯ, ಪ್ರವಚನದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ” ಎಂದರು.
ರಾಷ್ಟ್ರೀಯ ಬಸವದಳದ ರಾಜ್ಯ ಅಧ್ಯಕ್ಷ ಕೆವಿ ವೀರೇಶ ಮಾತನಾಡಿ, “ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧಿವೇಶನವನ್ನು ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಭಾನುವಾರ ಹಮ್ಮಿಕೊಳ್ಳಲಾಗುವುದು. ಈ ವರ್ಷದ ಅಧಿವೇಶನವನ್ನು ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ಫೆ.8ರಂದು ಹಮ್ಮಿಕೊಳ್ಳಲಾಗಿದೆ. ಎಲ್ಲ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳೂ ಕಾರ್ಯಕ್ರಮಕ್ಕೆ ಬರಬೇಕು. ಈ ಅಧಿವೇಶನದಲ್ಲಿ ರಾಷ್ಟ್ರೀಯ ಬಸವದಳದ ಸಂಘಟನೆ, ಲಿಂಗಾಯತ ಧರ್ಮಕ್ಕೆ ತೊಂದರೆ ಕೊಡುತ್ತಿರುವ ವೀರಶೈವ, ಹಿಂದೂ ಪದಗಳ ಕುರಿತು ಚರ್ಚಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಈಳಿಗನೂರು ಗ್ರಾಮದಲ್ಲಿ ಮದ್ಯಪಾನ ನಿಷೇಧಕ್ಕೆ ಗ್ರಾಮಸ್ಥರ ಸಭೆ; ಶನಿವಾರದವರೆಗೆ ಮದ್ಯ ಮಾರಾಟ ನಿಲ್ಲಿಸಲು ಗಡುವು
ಧಾರವಾಡದ ಅಕ್ಕಮಹಾದೇವಿ ಅನುಭವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿಯ ಅಕ್ಕ ನಾಗಲಾಂಬಿಕೆ ಪೀಠದ ಮಾತೆ ಜ್ಞಾನೇಶ್ವರಿ, ಬೆಂಗಳೂರು ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ತೆಲಂಗಾಣ ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಂಕರ್ಯಪ್ಪ ಪಾಟೀಲ, ರಾಷ್ಟ್ರೀಯ ಬಸವದಳ ರಾಜ್ಯ ಗೌರವಾಧ್ಯಕ್ಷ ಬಸವರಾಜ ಕೊಂಡಗುಳಿ, ಮುಖಂಡರಾದ ಹುಬ್ಬಳ್ಳಿಯ ಎಸ್ ಬಿ ಜೋಡಳ್ಳಿ, ಬಿದಿರಿನ ಸೋಮಶೇಖರ ಪಾಟೀಲ ಗಾದಗೆ, ಕೊಪ್ಪಳದ ವೀರಣ್ಣ ಲಿಂಗಾಯತ, ಕೆ ವಿ ರವಿಶಂಕರ ಸೇರಿದಂತೆ ಇತರರು ಇದ್ದರು.





