ಸುಮಾರು 10 ವರ್ಷಗಳಿಂದ ನಿಂತು ಹೋಗಿರುವ ಚಾಲುಕ್ಯ ಉತ್ಸವವನ್ನು ಈಬಾರಿಯಾದರೂ ಪುನರಾಯೋಜಿಸಲು ಕನ್ನಡಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಯಾವ ಸಂಘಟನೆಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮ್ಮನ್ನು ಬದಿಗಿಟ್ಟು ಉತ್ಸವ ನಡೆಸಲಾಗುತ್ತಿದೆ ಎಂದು ಕರವೇ (ಶಿವರಾಮೇಗೌಡ ಬಣ) ಬಾಗಲಕೋಟೆ ಜಿಲ್ಲಾಧ್ಯಕ ಬಸವರಾಜ ಧರ್ಮಂತಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರುಮ, “ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಇಂದಿನಿಂದ (ಜ.19) ಜ.21ರವರೆಗೆ ನಡೆಯಲಿರುವ ಚಾಲುಕ್ಯ ಉತ್ಸವಕ್ಕೆ ಹಾಗೂ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭಕ್ಕೆ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬಾದಾಮಿಯಲ್ಲಿ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗಾಗಿ ಕರವೇ ನಿರಂತರ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದೆ. ಆದರೆ, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಚಾಲುಕ್ಯ ಉತ್ಸವ ಹಾಗೂ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭಗಳಲ್ಲಿ ಕನ್ನಡಪರ ಹೋರಾಟಗಾರರಿಗೆ ಮನ್ನಣೆ ನೀಡಿಲ್ಲ ಎಂದು ಪರೋಕ್ಷವಾಗಿ ತೋರಿಸಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ರಾಷ್ಟ್ರ ನಿರ್ಮಾಣಕ್ಕೆ ಬಸವದಳ ಮಹತ್ವದ ಕೊಡುಗೆ ನೀಡಿದೆ: ಮಾತೆ ಗಂಗಾದೇವಿ
ಮುಂಬರುವ ದಿನಗಳಲ್ಲಿ ಇಂತಹ ನಿರ್ಲಕ್ಷ್ಯ ಧೋರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ತಕ್ಕ ಉತ್ತರ ನೀಡುತ್ತದೆ ಎಂದು ರಾಜ್ಯ ವಕ್ತಾರ ಬಿ ಎಮ್ ಪಾಟೀಲ್ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.





