ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ) ಸಮಿತಿಯಿಂದ ವಿಬಿ- ಜಿ ರಾಮ್ ಜಿ ವಿರೋಧಿಸಿ ʼಮನರೇಗಾʼ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಕಾಯ್ದೆಯನ್ನು ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಬಳಿಕ ಪ್ರತಿಭಟನಾಕಾರರು ತಾಲೂಕಿನ ಮಮಟಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಖಾಂತರ ಪ್ರಧಾನ ಮಂತ್ರಿ ಮೋದಿಯವರಿಗೆ ಮನವಿ ಸಲ್ಲಿಸಿದರು.
“ಮನರೇಗಾ ದೇಶದ ಎಲ್ಲ ಗ್ರಾಮೀಣ ಜನರಿಗೂ ಉದ್ಯೋಗದ ಹಕ್ಕಾಗಿದೆ. ಜನರಿಗೆ ತಾವಿರುವ ಪ್ರದೇಶದಲ್ಲೇ ನೂರು ದಿನಗಳ ಕೆಲಸ ಕೇಳಿ ಪಡೆಯುವ ಅವಕಾಶವಿತ್ತು. ವಲಸೆಯಿಂದ ಮರಳಿದವರೂ ಕೂಡ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಪಡೆಯಬಹುದಾಗಿತ್ತು” ಎಂದರು.
“ವಿಬಿ-ಗ್ರಾಮ್ ಜಿ ಕಾನೂನಿನ(ಪರಿಚ್ಛೇದ 5(1)ರ ಪ್ರಕಾರ, ಕೇಂದ್ರ ಸರ್ಕಾರ ತನ್ನಿಚ್ಚೆಯಂತೆ ನೋಟಕ್ಕೆ ಮಾಡಿ ಬಜೆಟ್ ನೀಡುವ ಪ್ರದೇಶಗಳಲ್ಲಿ ಮಾತ್ರ ಇದು ಜಾರಿಯಲ್ಲಿರುತ್ತದೆ. ಇದರರ್ಥ, ದೇಶದ ಎಲ್ಲ ಜನರಿಗೂ, ಎಲ್ಲ ಕಡೆಯೂ ಉದ್ಯೋಗ ಒಂದು ಹಕ್ಕಾಗಿ ಉಳಿಯುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಉದ್ಯೋಗದ ಖಾತರಿಯೇ ಇರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮನರೇಗಾದಲ್ಲಿ ತಮಗೆ ಬೇಕಾದಾಗ ಗ್ರಾಮೀಣ ಭಾಗದ ಎಷ್ಟು ಜನ ಬೇಕಾದರೂ ಕೆಲಸಕ್ಕೆ ಅರ್ಜಿ ಹಾಕಬಹುದಾಗಿತ್ತು. ಅರ್ಜಿ ಹಾಕಿದ ಹದಿನೈದು ದಿನದೊಳಗೆ ಕೆಲಸ ನೀಡುವುದು ಸರ್ಕಾರದ ಕರ್ತವ್ಯವಾಗಿದ್ದು, ಕೂಲಿ ಹಣ ಪಾವತಿಸುವ ಹೊಣೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿತ್ತು. ಬಜೆಟ್‌ಗೆ ಇಂತಿಷ್ಟೇ ಎಂಬ ಮಿತಿ ಇರಲಿಲ್ಲ. ಬೇಡಿಕೆ ಇದ್ದಷ್ಟು ಬಜೆಟ್ ಪೂರೈಸುವುದು ಕೇಂದ್ರ ಸರ್ಕಾರದ ಹೊಣೆಯಾಗಿತ್ತು” ಎಂದರು.
“ವಿಬಿ-ಜಿ ರಾಮ್ ಜಿ ಕಾನೂನಿನ ಪರಿಚ್ಛೇದ 4(5), 4(6)ರ ಪ್ರಕಾರ, ಪ್ರತಿಯೊಂದು ವಿತ್ತ ವರ್ಷಕ್ಕೂ ಆಯಾ ರಾಜ್ಯಕ್ಕೆ ಎಷ್ಟು ಹಣವನ್ನು ಕೊಡಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ತನ್ನದೇ ಅಳತೆಗೋಲಿನ ಮೇಲೆ ನಿರ್ಧರಿಸುತ್ತದೆ. ಅಂದರೆ ಯಾವ ವರ್ಷ ಯಾವ ಪಂಚಾಯಿತಿಗೆ ಎಷ್ಟು ಹಣ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ನಿರ್ಧಾರವಾಗಿರುತ್ತದೆ. ಅಂದರೆ ಆಯಾ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಬಜೆಟ್‌ಗೆ ಅನುಗುಣವಾಗಿಯೇ ಪಂಚಾಯಿತಿಗಳು ಉದ್ಯೋಗ ಕೊಡಬೇಕು. ‘ಮನರೇಗಾ’ ಕಾನೂನಿನಲ್ಲಿದ್ದ ‘ಬೇಡಿಕೆ ಇದ್ದಲ್ಲಿ ಕೆಲಸ ಕೊಡು, ಕೂಲಿಕೊಡು’ ಎನ್ನುವುದು ಹೋಗಿ ಈಗ ‘ಕೇಂದ್ರ ದಯಪಾಲಿಸಿದರೆ ಮಾತ್ರ ಕೆಲಸೆ ಎಂದಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?
“ಮನರೇಗಾದಲ್ಲಿ ಕೆಲಸ ಕೊಡುವ ಜವಾಬ್ದಾರಿ ಪಂಚಾಯಿತಿಯೆಂದರೆ ರಾಜ್ಯ ಸರ್ಕಾರದ್ದು, ಕೆಲಸಗಾರರ ಕೂಲಿಯ ಸಂಪೂರ್ಣ ಮೊತ್ತವನ್ನು ಮತ್ತು ಸಾಮಗ್ರಿ-ಸಲಕರಣೆಗಳ ವೆಚ್ಚದ ಶೇ.75ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿತ್ತು. ‘ವಿಬಿ-ಜಿ ರಾಮ್ ಜಿ’ ಕಾನೂನಿನ ಪರಿಚ್ಛೇದ 22(2)ರ ಪುಕಾರ, ಕೇಂದ್ರ ಮತ್ತು ರಾಜ್ಯಗಳ ನಡುವೆ ವೆಚ್ಚದ ಹಂಚಿಕೆಯ ಪ್ರಮಾಣ 60:40 ಇರುತ್ತದೆ. ರಾಜ್ಯ ಸರ್ಕಾರಗಳ ಮೇಲೆ ಇಷ್ಟು ದೊಡ್ಡ ಹೊರ ಹೊರೆಸುವುದರಿಂದ ಕೂಲಿ ಪಾವತಿಯಲ್ಲಿ ಆಗುವ ವಿಳಂಬ, ಅನಿಶ್ಚಿತತೆಗಳು ನಿತ್ಯದ ಗೋಳಾಗುತ್ತದೆ. ಕೂಲಿಯನ್ನೂ ತಾನೇ ಕೊಡಬೇಕಾಗಿ ಬಂದಾಗ ರಾಜ್ಯ ಸರ್ಕಾರವು ಕೆಲಸ ಕೊಡುವುದನ್ನೇ ಕಡಿಮೆ ಮಾಡಬಹುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಕೀರವ್ವ, ಲಕ್ಷಮವ್ವ, ಪ್ರಭಾವತಿ, ಶಿವಬಾಯವ್ವ, ಹನಮವ್ವ, ಗೌರಮ್ಮ, ಮೀನಾಕ್ಷಿ, ಶಿವನಗೌಡ ಕರಿಗೌಡ, ಯಲ್ಲಪ್ಪ, ಈರಮ್ಮ, ಶಿವಕ್ಕ, ಶಂಕ್ರವ್ವ, ಪಾರ್ವತವ್ವ, ಲಕ್ಕವ್ವ, ಗೀತಾ ಹಾಗೂ ಶಿಲ್ಪಾ ಇದ್ದರು.





