ಬಾಗಲಕೋಟೆಯ ಪಂಖಾ ಮಸೀದಿ ಮುಂಭಾಗ ನಡೆದ ಕಲ್ಲು ತೂರಾಟ ಪ್ರಕರಣ ದ್ವೇಷಪೂರಿತವಲ್ಲ ಎಂದು ಸಾಬೀತಾದರೂ, ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿಯಂತಹ ಪ್ರಖರ ಭಾಷಣಕಾರರ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ಭಾಷಣಕಾರರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಆದೇಶವನ್ನು ವಿರೋಧಿಸಿದ ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು, ಮಸೀದಿಗೆ ಬೀಗ ಹಾಕಬೇಕು, ಎಸ್‌ಪಿ ವರ್ಗಾವಣೆಯಾಗಬೇಕು ಎಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಆ ಸಂಘಟನೆಗಳಿಗೆ ಅಷ್ಟೇ ಖಾರವಾಗಿ ಕಾನೂನಿನ ಮೂಲಕವೇ ತಿರುಗೇಟು ನೀಡಿದ್ದಾರೆ. ಇದು ಕೇಸರಿ ಪಡೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಎಸ್‌ಪಿಯವರು ಸುದ್ದಿಗೋಷ್ಟಿ ನಡೆಸಿದ್ದು, “ಯಾವುದೇ ಧಾರ್ಮಿಕ ಕೇಂದ್ರವನ್ನು ಕಾನೂನುಬಾಹಿರವಾಗಿ ಮುಚ್ಚಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ, ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯದ ಪ್ರಾರ್ಥನಾ ಮಂದಿರಕ್ಕೆ ಬೀಗ ಹಾಕುವ ಪ್ರಶ್ನೆಯೇ ಇಲ್ಲ” ಎನ್ನುವ ಮೂಲಕ ಬಿಜೆಪಿ ಪರ/ಬೆಂಬಲಿತ ಸಂಘಟನೆಗಳಿಗೆ ಮನವರಿಕೆ ಮಾಡಿದ್ದಾರೆ.
“ಪೊಲೀಸರು ಏಕಪಕ್ಷೀಯವಾಗಿ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ್ದಾರೆಂಬ ಆರೋಪ ಸಲ್ಲ. ನಿಷೇಧಾಜ್ಞೆ(Section 144/163) ಜಾರಿಯಲ್ಲಿದ್ದಾಗ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸುವುದು ಕಾನೂನು ಉಲ್ಲಂಘನೆ. ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರು ಅನಿವಾರ್ಯವಾಗಿ ಬಲಪ್ರಯೋಗ ಮಾಡಿದ್ದಾರೆ” ಎಂದರು.
ನವನಗರದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕು ಎಂಬ ಬೇಡಿಕೆಗೂ ಮಣಿಯದ ಎಸ್‌ಪಿ, “ಯಾವುದೇ ಕಟ್ಟಡ ತೆರವು ಮಾಡುವುದು ನಗರಸಭೆಯ ಕೆಲಸ, ಪೊಲೀಸರದ್ದಲ್ಲ. ನಾವು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತೇವೆಯೇ ಹೊರತು ರಾಜಕೀಯ ಪ್ರೇರಿತ ಒತ್ತಡಗಳಿಗೆ ಮಣಿಯುವುದಿಲ್ಲ” ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ ಕೆಡಿಪಿ ಸಭೆಯಲ್ಲಿ ಸಚಿವ ಲಾಡ್ – ಎಂಎಲ್‌ಸಿ ಜಕ್ಕಪ್ಪನವರ್ ನಡುವೆ ಜಟಾಪಟಿ!
ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಜಾ ಮಾಡಲು ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನೂ ಜಿಲ್ಲಾಡಳಿತ ಕ್ಯಾರೇ ಅಂದಿಲ್ಲ. ಬದಲಾಗಿ, “ಸಾಕ್ಷ್ಯಧಾರಗಳ ಆಧಾರದ ಮೇಲೆ ಬಂಧನಗಳು ನಡೆದಿವೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅವಕಾಶವಿಲ್ಲ” ಎಂದು ಹೇಳುವ ಮೂಲಕ ಸಂಘಟನೆಗಳಿಗೆ ತನಿಖಾ ಹಂತದಲ್ಲೂ ಹಿನ್ನಡೆಯಾಗುವಂತೆ ಮಾಡಿದ್ದಾರೆ.
ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ಸಂಘಟನೆಗಳ ʼಕೇಸರಿ ಸಂಗ್ರಾಮʼಕ್ಕೆ ಬೆದರದೆ, ಕಾನೂನಿನ ಕಟ್ಟುನಿಟ್ಟಿನ ಪಾಲನೆಯ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಸಂಘಟನೆಗಳು ಅದೆಷ್ಟೇ ಹೋರಾಟದ ಮುನ್ಸೂಚನೆ ನೀಡಿದರೂ, ಜಿಲ್ಲಾಡಳಿತದ ಗಟ್ಟಿಯಾದ ನಿಲುವು ಸದ್ಯಕ್ಕೆ ಅವರಿಗೆ ಯಾವುದೇ ಯಶಸ್ಸು ಸಿಗದಂತೆ ಮಾಡಿದೆ.





