ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಲಭ್ಯಗಳ ನಿರ್ವಹಣೆಗೆ ಆದಾಯವೇ ಪ್ರಮುಖ ಆಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಅವರು ಸ್ಥಳೀಯರಿಗೆ ತಿಳಿಸಿದರು.
ತೆರಿಗೆ ಪಾವತಿ ಅಭಿಯಾನದ ಅಂಗವಾಗಿ ಬಾಗಲಕೋಟೆ ತಾಲೂಕಿನ ಕಲಾದಗಿ, ಖಜ್ಜಿಡೋಣಿ, ದೇವನಾಳ, ತುಳಸಗಿರಿ ಹಾಗೂ ಗದ್ದನಕೇರಿ ಗ್ರಾಮ ಪಂಚಾಯಿತಿಗಳ ಮನೆ ಮನೆಗೆ ಭೇಟಿ ನೀಡಿ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ಶುಲ್ಕ ಹಾಗೂ ಇತರೆ ಕರಗಳನ್ನು ಪಾವತಿಸುವಂತೆ ಮನವಿ ಮಾಡಿದರು.
“ಗ್ರಾಮ ಪಂಚಾಯಿತಿ ಸಿಬ್ಬಂದಿ ದಾಖಲೆ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಆದಾಯ ಖರ್ಚಿನ ಲೆಕ್ಕಪತ್ರ ನವೀಕರಿಸುವುದು ಸೇರಿದಂತೆ ಆನ್‌ಲೈನ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಬೇಕು. ಮುಂದಿನ ಹದಿನೈದು ದಿನಗಳೊಳಗೆ ತೆರಿಗೆ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದಿ. ಬಲರಾಮ ಬಾಗಲಕೋಟ ಅವರ ಅಂಗಾಂಗ ದಾನ: ಕುಟುಂಬಸ್ಥರಿಗೆ ಉದ್ಯೋಗದ ಭರವಸೆ
ತೆರಿಗೆ ಸಂಗ್ರಹ ಪ್ರಗತಿ, ಬಾಕಿ ತೆರಿಗೆ ಪಟ್ಟಿ, ದಿನದ ವಸುಲಾತಿ ದಾಖಲೆಗಳು ಹಾಗೂ ಇ-ಗ್ರಾಮ ಸ್ವರಾಜ್ಯ ಪೋರ್ಟ್‌ನಲ್ಲಿ ದಾಖಲಾದ ಮಾಹಿತಿ ಪರಿಶೀಲಿಸಿದ ಅವರು, ತೆರಿಗೆ ವಸೂಲಾತಿ ಗುರಿ ನಿಗದಿ ಮಾಡಿ ಪ್ರತಿದಿನ ವಾರ ಪ್ರಗತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯಿತಿಗಳಿದ್ದು, 31.11 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕಿದೆ. ಈಗಾಗಲೇ ಅಂದಾಜು ₹25 ಕೋಟಿಯಷ್ಟು ಸಂಗ್ರಹವಾಗಿದೆ ಎಂದರು.
ಬಾಗಲಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಇದ್ದರು.





