ಬೇರೆ ಜಿಲ್ಲೆಗಳಿಂದ ಹಾಗೂ ಬೇರೆ ರಾಜ್ಯಗಳಿಂದ ವ್ಯಾಸಂಗಕ್ಕಾಗಿ ಆಗಮಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯು, ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಕಾನೂನು ಬಾಹಿರವಾಗಿ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವುದು ಗಂಭೀರ ಅಕ್ರಮವಾಗಿದೆ. ಈ ಕುರಿತು ತಕ್ಷಣ ಹಸ್ತಕ್ಷೇಪ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ವೈದ್ಯಕೀಯ ಇಂಜನಿಯರಿಂಗ್, ನರ್ಸಿಂಗ್ ವ್ಯಾಸಂಗಕ್ಕಾಗಿ ಬಂದು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳ ಹೆಸರುಗಳನ್ನು ಕಾನೂನು ಮತ್ತು ಚುನಾವಣಾ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂಬ ಕುರಿತು ವ್ಯಾಪಕ ದೂರುಗಳು ಬಂದಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ತಾತ್ಕಾಲಿಕ ವಾಸಸ್ಥಳ ಹೊಂದಿರುವ ವಿದ್ಯಾರ್ಥಿಗಳು, ತಮ್ಮ ಮೂಲ ಮತಕ್ಷೇತ್ರದಲ್ಲಿಯೇ ಮತದಾರರಾಗಿ ನೋಂದಾಯಿತರಾಗಿರಬೇಕೆಂಬುದು ಚುನಾವಣಾ ಕಾನೂನುಗಳ ಮೂಲಭೂತ ತತ್ವವಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ಸ್ಥಳೀಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಕೇವಲ ಅಕ್ರಮವಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಪಾವಿತ್ರ್ಯವನ್ನು ಹಾಳುಮಾಡುವ ಗಂಭೀರ ಅಪರಾಧವಾಗಿದೆ. ಇಂತಹ ಕಾಯ್ದೆಬಾಹಿರ ಹೆಸರು ಸೇರ್ಪಡೆಗಳ ಹಿಂದೆ ಸಂಘಟಿತ ಯತ್ನ, ರಾಜಕೀಯ ಒತ್ತಡ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯವಿರುವ ಶಂಕೆಯನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ. ಈ ಅಕ್ರಮವನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆಗಳು ಮೂಡುವ ಸಾಧ್ಯತೆ ಇದೆ. ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ನೇರ ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ:ಬಾಗಲಕೋಟೆ | ಸ್ಕೀಮ್ ನೌಕರರ ಗೌರವಧನ ಹೆಚ್ಚಳಕ್ಕೆ AIUTUC ಒತ್ತಾಯ
ಸಮಿತಿಯ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಷ ಹದ್ಲಿ, ಜಿಲ್ಲಾ ಸಂಯೋಜಕರಾದ ಶ್ರೀಧರ ನೀಲನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ ಬಾಲಗಾವಿ, ಪದಾಧಿಕಾರಿಗಳಾದ ವಿಜಯ ಮುಳ್ಳೂರ, ಪ್ರಭು ಹಳ್ಳೂರ, ಶಬಾಜಿ ಮಾಲಿನವನಿ, ಇಲಿಯಾಸ್ ಮದರಖಂಡಿ ಹಾಗೂ ಬಂದೇನವಾಜ ಬದಾಮಿ ಮನವಿ ಸಲ್ಲಿಸುವ ವೇಳೆ ಇದ್ದರು.





