ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಮೆರವಣಿಗೆಯ ವೇಳೆ ಕಲ್ಲು ತೂರಾಟದ ಘಟನೆ ನಡೆಯಬಾರದಾಗಿತ್ತು. ವಿಶೇಷವಾಗಿ ಐತಿಹಾಸಿಕ ಹೋಳಿಹಬ್ಬ ಹಾಗೂ ಪವಿತ್ರ ರಂಜಾನ್ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಇಂತಹ ಅಹಿತಕರ ಬೆಳವಣಿಗೆ ಸಮಾಜದ ಸೌಹಾರ್ದತೆಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಪತ್ರಿಕಾ ಪ್ರಕಟಣಾ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಹೋಳಿ ಹಬ್ಬವು ಸಂತೋಷ ಮತ್ತು ಏಕತೆಯ ಸಂಕೇತವಾಗಿದ್ದರೆ, ರಂಜಾನ್ ಪವಿತ್ರತೆ, ಸಹನಶೀಲತೆ ಮತ್ತು ಶಾಂತಿಯ ಸಂದೇಶ ನೀಡುತ್ತದೆ. ಇಂತಹ ಪವಿತ್ರ ಸಂದರ್ಭಗಳಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಕೆಲ ದುಷ್ಕೃತ್ಯಗಳಿಂದ ಬಾಗಲಕೋಟೆಯ ಶಾಂತಿ ಪರಂಪರೆಗೆ ಕಳಂಕಿತವಾಗಬಾರದು.
ಘಟನೆಗೆ ಕಾರಣರಾದವರನ್ನು ತಕ್ಷಣ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಹಬ್ಬಗಳು ಹಾಗೂ ಮೆರವಣಿಗೆಗಳಿಗೆ ಸಮರ್ಪಕ ಪೊಲೀಸ್ ಭದ್ರತೆ ಒದಗಿಸಬೇಕು. ವದಂತಿ ಮತ್ತು ಪ್ರಚೋದನಾತ್ಮಕ ಸಂದೇಶಗಳನ್ನು ತಡೆಯಲು ಕಠಿಣ ಕ್ರಮ ಜರುಗಿಸಬೇಕು. ಎಲ್ಲಾ ಸಮುದಾಯದ ಮುಖಂಡರು ಸೇರಿ ಶಾಂತಿ ಸಭೆ ನಡೆಸಿ ಪರಸ್ಪರ ವಿಶ್ವಾಸ ಬಲಪಡಿಸಬೇಕು. ಜನತೆ ಯಾವುದೇ ರೀತಿಯ ಪ್ರಚೋದನೆಗಳಿಗೆ ಒಳಗಾಗದೆ, ಶಾಂತಿ ಮತ್ತು ಸಹೋದರತ್ವದ ಮಾರ್ಗದಲ್ಲಿ ನಡೆಯಬೇಕು. ಬಾಗಲಕೋಟೆ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದದ ನೆಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳೋಣ ಎಂದಿದ್ದಾರೆ.





