ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ 4.5 ಲಕ್ಷ ಕೋಟಿ ರೂ. ಗಾತ್ರದ ಈ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಹೇಗಿರಬಹುದು ಎಂಬ ಕುತೂಹಲ ರಾಜ್ಯದ ಜನರಲ್ಲಿ ಇರುವಂತೆ ಬಾಗಲಕೋಟೆ ಜಿಲ್ಲೆಯ ಜನರಲ್ಲಿಯೂ ಇದೆ.
ಪ್ರತ್ಯೇಕ ಜಿಲ್ಲೆಯಾಗಿ ಮೂರು ದಶಕದ ಹೊಸ್ತಿಲಲ್ಲಿ ನಿಂತಿರುವ ಬಾಗಲಕೋಟೆ ಜಿಲ್ಲೆ, ರಾಜಕೀಯ ಕಷ್ಟ ಕಾಲದಲ್ಲಿ ಸಿದ್ದರಾಮಯ್ಯ ಅವರ ಕೈಹಿಡಿದು ಅವರನ್ನು ರಾಜಕೀಯ ಮೇಲಿನ ಸ್ತರದಲ್ಲೇ ನಿಲ್ಲಿಸಿದೆ. ಅವರು ಬಾದಾಮಿ ಕ್ಷೇತ್ರದಿಂದ ಗೆದ್ದು ಹೋಗಿ ವಿರೋಧ ಪಕ್ಷದ ನಾಯಕನಾಗಿ ಎರಡನೇ ಅವಧಿಗೆ ಸಿಎಂ ಆಗಲು ಭದ್ರ ಅಡಿಪಾಯ ಹಾಕಿದ ಈ ಜಿಲ್ಲೆಗೆ 2023-24, 2024-25ನೇ ಸಾಲಿನ ಬಜೆಟ್ ನಲ್ಲಿ ಅಂತಹ ಎದ್ದು ಕಾಣುವಂತಹ ಕೊಡುಗೆಯನ್ನು ಅವರು ನೀಡಿಲ್ಲ.
ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡುವ ಸಾಧ್ಯತೆ ಇರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮರುಚುನಾವಣೆ ಹತ್ತಿರದಲ್ಲಿದೆ. ರಾಜ್ಯ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಈ ಕ್ಷೇತ್ರದ ಮರುಚುನಾವಣೆ ದಿನಾಂಕ ಘೋಷಣೆ ಆಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕಾಗಿದೆ. ಈ ಚುನಾವಣೆ ಸಿದ್ದರಾಮಯ್ಯ ಅವರ ಪ್ರತಿಷ್ಠೆಯನ್ನು ಒರೆಗೆ ಹಚ್ಚುವ ಚುನಾವಣೆ ಆಗಲಿದೆ. ಯಾಕೆಂದರೆ ಸಿಎಂ ಅವರ ಕಟ್ಟಾ ಬೆಂಬಲಿಗರಾಗಿದ್ದ ಮೇಟಿ ಅವರು ಪ್ರತಿನಿಧಿಸಿದ್ದ ಕ್ಷೇತ್ರ ಇದು. ಮರಳಿ ಕಾಂಗ್ರೆಸ್ ಮಡಿಲಿಗೆ ಈ ಕ್ಷೇತ್ರ ತಂದುಕೊಡುವುದು ಸಿಎಂ ಅವರಿಗೆ ಪ್ರಮುಖ ಆದ್ಯತೆ ಆಗಲಿದೆ. ಆ ಕಾರಣದಿಂದಲೂ ಸಿಎಂ ಬಾಗಲಕೋಟೆ ಜಿಲ್ಲೆಯ ಜನರ ಮನಸ್ಸು ಗೆಲ್ಲಲು ಬಜೆಟ್ ನಲ್ಲಿ ತಂತ್ರಗಾರಿಕೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.
ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ಅಗತ್ಯ ಅನುದಾನ ಒದಗಿಸಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲಾಗಿದೆ.

ಆಲಮಟ್ಟಿ ಅಣೆಕಟ್ಟೆಯನ್ನು 524.225 ಮೀ.ಗೆ ಎತ್ತರಿಸಿ ಕರ್ನಾಟಕದ ಪಾಲಿನ 130 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಯುಕೆಪಿಗೆ ಎಪ್ಪತ್ತರ ದಶಕದಲ್ಲಿ ಸಿಎಂ ಆಗಿದ್ದ ದೇವರಾಜ್ ಅರಸು ಅವರಿಂದ ಹಿಡಿದು ಈವರೆಗೆ ಅಧಿಕಾರ ನಡೆಸಿದ ಎಲ್ಲ ಸಿಎಂಗಳು ಸಾಧ್ಯವಾದಷ್ಟು ಅನುದಾನ ಮಂಜೂರು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಯೋಜನೆ ಅಂತರರಾಜ್ಯ ಜಲ ವಿವಾದವಾಗಿ ಮಾರ್ಪಟ್ಟಿರುವುದರಿಂದ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಕರ್ನಾಟಕದ ಪಾಲಿನ ನೀರು ಕ್ರಷ್ಣಾರ್ಪಣೆ ಆಗಿ ನೆರೆಯ ರಾಜ್ಯಗಳ ಪಾಲಾಗುವ ಆತಂಕ ಇದೆ. ಯೋಜನೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಕರ್ನಾಟಕದ ಈ ವಿಳಂಬ ನಡೆಯನ್ನು ತಮಗೊಂದು ಸದವಕಾಶ ಎಂದು ಪರಿಗಣಿಸಿದ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕರ್ನಾಟಕದ ಪಾಲಿನ ನೀರು ಕಬಳಿಸಲು ಸದ್ದುಗದ್ದಲವಿಲ್ಲದೆ ಕಾರ್ಯತಂತ್ರ ರೂಪಿಸಿವೆ.
ಇತ್ತ ಕರ್ನಾಟಕ ಸರ್ಕಾರ ಯುಕೆಪಿ ಮೂರನೇ ಹಂತದ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲು ಸಜ್ಜಾಗಿರುವಾಗಲೇ ಅತ್ತ ಆಂಧ್ರಪ್ರದೇಶ ಇದಕ್ಕೆ ತಕರಾರು ತೆಗೆದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜಕೀಯ ಕಾರಣಕ್ಕಾಗಿ ಆಂಧ್ರಪ್ರದೇಶದ ಪತ್ರವನ್ನು ಮಹತ್ವದ್ದು ಎಂದು ಪರಿಗಣಿಸಿದ ಕೇಂದ್ರ ಜಲಶಕ್ತಿ ಇಲಾಖೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ಸ್ಪಷ್ಟೀಕರಣ ಕೇಳಿದೆ. ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಬೇಕಾಗಿರುವ 1.33 ಲಕ್ಷ ಹೆ. ಜಮೀನನ್ನು ಒಂದೇ ಕಂತಿನಲ್ಲಿ ಸ್ವಾಧೀನ ಪಡಿಸಿಕೊಳ್ಳುವ ನಿರ್ಧಾರವನ್ನು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ತೆಗೆದುಕೊಳ್ಳಲಾಗಿದೆ. ಈ ಭೂಸ್ವಾಧೀನಕ್ಕೆ ಅಂದಾಜು 76000 ಕೋಟಿ ರೂ. ಬೇಕಾಗಲಿದ್ದು, ಆ ಹಣವನ್ನು ರೈತರಿಗೆ ಮೂರು ಹಂತಗಳಲ್ಲಿ ಕೊಡಲು ಈ ಬಜೆಟ್ ನಲ್ಲಿ ಅನುದಾನ ಒದಗಿಸಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಈ ಅನುದಾನವನ್ನು ಈ ಸಲದ ಬಜೆಟ್ ನಲ್ಲಿ ತೆಗೆದಿರಿಸಬೇಕು ಎಂಬುದು ಜಮೀನು ಕಳೆದುಕೊಳ್ಳುವ ರೈತರ ಆಶಯವಾಗಿದೆ. ಈಗಾಗಲೇ 20,000 ಕೋಟಿ ರೂ. ವೆಚ್ಚವಾಗಿರುವ ಯುಕೆಪಿ ಇನ್ನೂ 76000 ಕೋಟಿ ರೂ. ಕೇಳುತ್ತಿದೆ. ಇದರಿಂದ ಇದು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದ ದುಬಾರಿ ಯೋಜನೆಯಾಗಿದೆ. ಈ ಹಣವನ್ನು ಸಿಎಂ ಈ ಸಲದ ಬಜೆಟ್ ನಲ್ಲಿ ಹೇಗೆ ಕ್ರೋಢೀಕರಿಸಿ ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿಸಬಹುದು ಎಂಬುದನ್ನು ಕಾದು ನೋಡಬೇಕಿದೆ.
ಇದಲ್ಲದೆ ಜಿಲ್ಲೆಯ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಮಲಪ್ರಭಾ ಎಡದಂಡೆ ಕಾಲುವೆ ಮತ್ತು ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸಿ ಟೇಲ್ ಎಂಡ್ ವರೆಗೂ ನೀರು ಹರಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಬೆಕಾಗಿದೆ. ಕೆರೂರ ಏತ ನೀರಾವರಿ ಯೋಜನೆ ಹೆರಕಲ್ ಏತ ನೀರಾವರಿ ಯೋಜನೆ ಒಳಗೊಂಡು ಅಪೂರ್ಣ ಸ್ಥಿತಿಯಲ್ಲಿರುವ ವಿವಿಧ ಏತ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಿ ಅವುಗಳನ್ನು ಪೂರ್ಣಗೊಳಿಸಿದರೆ ಆಲಮಟ್ಟಿ ಜಲಾಶಯದ ಹಿನ್ನೀರು ಬರಪೀಡಿತ ಪ್ರದೇಶಗಳ ರೈತರ ಜಮೀನುಗಳಿಗೆ ಹರಿದು ಬರಲಿದೆ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೂ ಅನುದಾನ ಬೇಕಾಗಿದೆ. ಜಿಲ್ಲೆಯಲ್ಲಿ ವಿಫುಲ ಅವಕಾಶವಿರುವ ಪ್ರವಾಸೋದ್ಯಮ ಬೆಳೆಯಲು ಬಜೆಟ್ ನಲ್ಲಿ ಅನುದಾನ ಬೇಕಾಗಿದೆ.

ಚಾಲುಕ್ಯ ಉತ್ಸವಕ್ಕೆ ಪ್ರತಿ ವರ್ಷ ಬಜೆಟ್ ನಲ್ಲಿ 5 ಕೋಟಿ ರೂ. ಮೀಸಲಿಡಬೇಕೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಜಿಲ್ಲೆಗೆ ಕಳೆದ ಸಾಲಿನಲ್ಲಿ ಮಂಜೂರು ಮಾಡಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬಜೆಟ್ ನಲ್ಲಿ ಕನಿಷ್ಠ 100 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಭೂಸ್ವಾಧೀನ ವಿಳಂಬದಿಂದ ಕುಂಟುತ್ತ ಸಾಗಿರುವ ರೈಲ್ವೆ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಬೇಕಾಗಿದೆ. ಹಲಗಲಿ ಬೇಡರು ಮತ್ತು ಸಿಂಧೂರ ಲಕ್ಷ್ಮಣ ಪ್ರಾಧಿಕಾರವನ್ನು ಸ್ಥಾಪನೆ ಮಾಡಿ ಬಜೆಟ್ ನಲ್ಲಿ ಅದಕ್ಕೆ ಹಣ ತೆಗೆದಿರಿಸಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇದಲ್ಲದೆ ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ಬಜೆಟ್ ನಲ್ಲಿ ಒತ್ತು ಕೊಡಬೇಕು ಎಂಬ ಬೇಡಿಕೆ ಇದೆ. ತೋಟಗಾರಿಕೆ ಉತ್ಪನ್ನಗಳು ವಿದೇಶಕ್ಕೆ ಹೋಗಲು ರೈತರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಬಜೆಟ್ ನಲ್ಲಿ ಅನುದಾನ ತೆಗೆದಿಡಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳೊಂದಿಗೆ ಬಾಗಲಕೋಟೆ ಜಿಲ್ಲೆಯ ಜನ ಸಿಎಂ ಸಿದ್ದರಾಮಯ್ಯ ಅವರಿಂದ ಬಹಳಷ್ಟು ಅಪೇಕ್ಷೆ ಮಾಡಿದ್ದಾರೆ.
ತಮ್ಮ ಮೇಲೆ ವಿಶೇಷ ಅಭಿಮಾನ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಜನರ ಭಾವನೆಗಳಿಗೆ ಸಿಎಂ ಯಾವ ರೀತಿ ಸ್ಪಂದಿಸಬಹುದು ಎಂಬುದಕ್ಕೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಜಿಲ್ಲೆಯಲ್ಲಿ ಕುರಿ ಸಾಕಾಣಿಕೆದಾರರಿಗೆ ಬಿಳಿ ಬಣ್ಣದ ಯಳಗ ಕುರಿ ತಳಿ ಲಾಭದಾಯಕ ಆಗಿರುವುದರಿಂದ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಯಳಗ ತಳಿ ಕುರಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ತೆರೆಯಬೇಕು. ಜಿಲ್ಲೆಯಲ್ಲಿ ನೇಕಾರರಿಗೆ ಉತ್ತೇಜನ ನೀಡಲು ರಬಕವಿ – ಬನಹಟ್ಟಿ ಇಲ್ಲವೆ ಅಮೀನಗಡ – ಸೂಳೆಭಾವಿ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡಬೇಕು. ಮಹಾದಾಯಿ ಯೋಜನೆಯಡಿ ಕಳಸಾ ಬಂಡೂರಿ ನಾಲಾ ನಿರ್ಮಾಣ ಕಾಮಗಾರಿಗೆ ವೇಗ ನೀಡಿದರೆ ಬಾದಾಮಿ ಗುಳೇದಗುಡ್ಡ ಹುನಗುಂದ ತಾಲ್ಲೂಕುಗಳು ನೀರಾವರಿ ಸೌಲಭ್ಯ ಹೊಂದಲಿವೆ ಎಂಬುದು ರೈತರ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಜಿಂಕೆ ವನ, ನವಿಲು ಧಾಮ, ಮೊಸಳೆ ಪಾರ್ಕ್,ಕರಡಿ ಧಾಮ ಮಾದರಿಯಲ್ಲಿ ಜಿಲ್ಲೆಯ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ತೋಳಗಳ ಸಂತತಿ ಸಂರಕ್ಷಣೆಗೆ ತೋಳಗಳ ಪಾರ್ಕ್ ಸ್ಥಾಪಿಸಬೇಕು ಎಂಬುದು ವನ್ಯಜೀವಿ ಸಂರಕ್ಷಣಾ ಆಸಕ್ತರು ಮತ್ತು ಪರಿಸರವಾದಿಗಳು ಬೇಡಿಕೆಯಾಗಿದೆ. ಜಿಲ್ಲೆಯನ್ನು ನೆರೆಯ ಜಿಲ್ಲೆಗಳೊಂದಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರಮುಖ ವಾಣಿಜ್ಯ ನಗರಗಳಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳನ್ನು ಕೆಶಿಪ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಬೇಕು. ಬಾದಾಮಿ ಪರಿಸರದಲ್ಲಿ ಶಿಲ್ಪಕಲೆ ಮತ್ತು ಲಲಿತ ಕಲಾ ವಿಶ್ವ ವಿದ್ಯಾಲಯದ ಆರಂಭಕ್ಕೆ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಬೇಕು ಎಂಬುದು ಕೂಡ ಜಿಲ್ಲೆಯ ಕಲಾಸಕ್ತರ ಬೇಡಿಕೆಯಾಗಿದೆ.
ಇದನ್ನೂ ಓದಿ: ಬಾಗಲಕೋಟೆ | ಶಿವಾಜಿ ಮಹಾರಾಜರ ಮೆರವಣಿಗೆಯಲ್ಲಿ ಕಲ್ಲು ತೂರಾಟ; ಜಿಲ್ಲಾ ಕಾಂಗ್ರೆಸ್ ವಿಷಾದ
ಹಣಕಾಸು ಖಾತೆ ಸಚಿವರಾಗಿ ಸಿಎಂ ಸಿದ್ದರಾಮಯ್ಯ ನಾಳೆ ಮಂಡಿಸಲಿರುವ ತಮ್ಮ 17ನೇ ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಂಪನ್ಮೂಲ ಒದಗಿಸಿ ಜಿಲ್ಲೆಯ ಜನರ ಆಶಯಗಳ ಸಾಕಾರಕ್ಕೆ ಸ್ಪಂದಿಸಬಹುದೋ ಇಲ್ಲವೋ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.
ಜಿಲ್ಲೆಯ ಜನರ ಆಸೆ ನಿರೀಕ್ಷೆ ಬೇಡಿಕೆಗಳೇನೋ ಬೆಟ್ಟದಷ್ಟಿವೆ. ಆದರೆ ರಾಜ್ಯ ಸರಕಾರದ ಇತಿಮಿತಿಯಲ್ಲಿ ಹಣಕಾಸು ಸಂಪನ್ಮೂಲ ಲಭ್ಯತೆಯ ಅವಕಾಶಗಳ ನಡುವೆ ಬಾಗಲಕೋಟೆ ಜಿಲ್ಲೆಗೆ ಏನು ಸಿಗುವುದೋ ಎಂಬುದನ್ನು ಕಾದು ನೋಡಬೇಕಿದೆ.
ಬರಹ: ಮುತ್ತು ನಾಯ್ಕರ್, ಹಿರಿಯ ಪತ್ರಕರ್ತರು





