ವಲಸೆ ಎಂಬುದು ಉತ್ತರ ಕರ್ನಾಟಕದ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದ್ದು, ಅದು ಮಹಿಳೆಯರ ಜೀವನದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಒಡಲದನಿ ಮಹಿಳಾ ಒಕ್ಕೂಟದ ನಿರ್ದೇಶಕಿ ಡಾ.ಭುವನೇಶ್ವರಿ ಕಾಂಬಳೆ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ನಮ್ಮ ಸಂಶೋಧನಾ ಅಧ್ಯಯನದ ದಿನಗಳಲ್ಲಿಈ ಬಗ್ಗೆ ಮನವರಿಕೆಯಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ವಲಸೆಯನ್ನು ತಡೆಯುವ ಯತ್ನವಾಗಿ ‘ಒಡಲದನಿ’ ಮಹಿಳಾ ಒಕ್ಕೂಟ ಆರಂಭವಾಯಿತು. ಒಕ್ಕೂಟದ ಮೂಲಕ ನೂರಾರು ಜನ ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿಲು ಸಾಧ್ಯವಾಗಿದೆ. ತಮ್ಮ ಒಕ್ಕೂಟದ ಮಹಿಳೆಯರು ಶಕ್ತಿ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ, ವಲಸೆಯಂತಹ ಸಾಮಾಜಿಕ ಸಮಸ್ಯೆಗೆ ‘ಒಡಲದನಿ’ ಹಾಗೂ ಅದರ ಸಂಸ್ಥಾಪಕರು ಕಂಡುಕೊಂಡಿರುವ ನವೀನ ಹಾಗೂ ಪರಿಣಾಮಕಾರಿ ಮಾರ್ಗವನ್ನು ಶ್ಲಾಘಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಗಬ್ಬೆದ್ದ ಮೂತ್ರಾಲಯಗಳು; ಸಾರ್ವಜನಿಕ ಅಸಮಾಧಾನ, ನಗರಸಭೆ ಮೌನ
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಸಾವಿತ್ರಿ ತಪೇಲಿ ಮಾತನಾಡಿದರು. ಪ್ರಾಚಾರ್ಯ ಸಿಕಂದರ್ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಸ್. ಜಿ.ಎಮ್ಮಿ, ಸಿ.ಜಿ.ಹವಾಲ್ದಾರ, ದೇವು ಡಂಬಳ, ರಾಣಿ ತೋಪಲಕಟ್ಟಿ, ಬಸವರಾಜ ಹೊಸಮನಿ, ಬಿ.ವೈ.ಕೊಡಗಾನೂರ ಮಹಿಳಾ ವೇದಿಕ ಸಂಚಾಲಕಿ ದಾನಮ್ಮ ಮಠದ, ಸುರೇಶ ಎಚ್. ಎಸ್. ಬಿ. ವೈ.ಆಲೂರ ಇದ್ದರು. ಸನಾ ಶಿರಸಂಗಿ ನಿರೂಪಿಸಿದರು, ನಾಗವೇಣಿ ಗರಡಿ ವಂದಿಸಿದರು.





