ಬಡ ಮತ್ತು ನಿರ್ಗತಿಕ ಕಲಾವಿದರಿಗೆ ವಸತಿ ಯೋಜನೆ ಮತ್ತು ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ನೌಕರಿಯಲ್ಲಿ ಮೀಸಲಾತಿ ನೀಡಬೇಕು ಎಂದು ಹಿರಿಯ ಜಾನಪದ ಕಲಾವಿದ ಮಲ್ಲಪ್ಪ ಗಣಿ ಮನವಿ ಮಾಡಿದರು.
ಬಾಗಲಕೋಟೆಯ ರಬಕವಿ ಬನಹಟ್ಟಿ ಸಮೀಪದ ನಾವಲಗಿ ಗ್ರಾಮದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಕಲಾವಿದರ ಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಕಲಾವಿದರ ಸ್ಥಿತಿಗತಿಗಳ ಕುರಿತು ಸರ್ಕಾರ ಚಿಂತನೆ ಮಾಡುವುದರ ಜೊತೆಗೆ ಕಲಾವಿದರ ಏಳಿಗೆಗೆ ಕೈಜೋಡಿಸಬೇಕೆಂದರು. ಕಲಾವಿದರಿಗೆ ಉಚಿತ ವೈದ್ಯಕೀಯ ಸೇವೆ ನೀಡಬೇಕು, ಕಲಾವಿದರ ಕುಟುಂಬಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ರೀತಿಯ ಸಹಾಯವನ್ನು ಸರ್ಕಾರವೇ ನೀಡಬೇಕೆಂದು ಒತ್ತಾಯಿಸಿದರು.

ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಸಲ್ಲಿಕೆರಿ ಮಾತನಾಡಿ, “ನಿಜವಾದ ಕಲೆ, ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಗೌರವ ದೊರೆಯಬೇಕು. ಅಶ್ಲೀಲ ಹಾಡುಗಳು ಜಾನಪದ ಕ್ಯಾಸೆಟ್ಗಳ ಹಾವಳಿ ನಿಲ್ಲಬೇಕು. ಈ ಕುರಿತು ಈಗಾಗಲೇ ಹೋರಾಟಗಳು ಆರಂಭವಾಗಿವೆ” ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕಣ್ಣೂರ ಮಾತನಾಡಿ, “ಕಲಾವಿದರಿಗೆ ತಮ್ಮ ಕಲೆ ಅನಾವರಣಗೊಳಿಸಲು ಸಮ್ಮೇಳನ ಉತ್ತಮ ವೇದಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಇದನ್ನೂ ಓದಿ: ಬಾಗಲಕೋಟೆ | ರೈಲು ಸೇವೆ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ
ಯುವ ಮುಖಂಡರಾದ ವಿದ್ಯಾ ಸವದಿ ಮಾತನಾಡಿ, “ಜಾನಪದ ಕಲೆ ಮತ್ತು ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಕಾರ್ಯಕ್ರಮದಲ್ಲಿ ಚಿಮ್ಮಡದ ಪ್ರಭು, ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಕಾಂತಿ, ಉಪಾಧ್ಯಕ್ಷೆ ಮುತ್ತವ್ವ ಭಜಂತ್ರಿ, ತಾಲೂಕು ಘಟಕದ ಅಧ್ಯಕ್ಷ ಮ. ಕೃ. ಮೇಗಾಡಿ, ಗಂಗಾಧರ ಮೋಪಗಾರ, ಸಿದ್ದು ದೇವಾಣ, ದಾನಪ್ಪ ಆಸಂಗಿ, ಆನಂದ ಕಂಪು, ಗುರು ಮರಡಿಮಠ, ಹನುಮಂತ ಸವದಿ, ಬಸವರಾಜ ದಲಾಲ, ದಾಕ್ಷಾಯಿಣಿ ಮಂಡಿ, ಕಲಾವಿದರಾದ ಮಲ್ಲಪ್ಪ ಹೂಗಾರ, ಜೀವಪ್ಪ ಬಡಿಗೇರ, ವಿಶ್ವನಾಥ ದೇವದಾಸ, ಸಿದ್ದಪ್ಪ ಕಂಚು, ಹಣಮಂತ ಬರಗಾಲ, ಮಾರುತಿ ಭಜಂತ್ರಿ, ಶ್ರೀಶೈಲ ಪಟ್ಟಣಶೆಟ್ಟಿ, ಶೋಭಾ, ಎಂ ಎಸ್ ತುಪ್ಪದ, ಶಿಲ್ಪಾ ಕುಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮೀಣ ಭಾಗದ ಜನಪದ ಕಲಾವಿದರು ಇದ್ದರು.





