ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ಬಾಗಲಕೋಟೆ ನಗರದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿ ಮೆರವಣಿಗೆ ವೇಳೆ ವೇಳೆ ಕಲ್ಲು ತೂರಾಟ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿದ್ಧಾರ್ಥ ಗೋಯಲ್ ಸ್ಪಷ್ಟನೆ ನೀಡಿದ್ದಾರೆ. ಕಲ್ಲು ತೂರಾಟ ಕೃತ್ಯವು ಮೆರವಣಿಗೆಯು ಮಸೀದಿ ಬಳಿ ತಲುಪುವ ಮೊದಲೇ ನಡೆದಿದೆ. ಒಬ್ಬನೇ ಈ ಕೃತ್ಯ ಎಸಗಿದ್ದಾನೆ. ಬೇರೇ ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಎಸ್‌ಪಿ ಗೋಯಲ್, “ಕಲ್ಲು ತೂರಾಟ ಪೂರ್ವ ಯೋಜಿತ ಕೃತ್ಯವಾಗಿರಲಿಲ್ಲ ಮತ್ತು ಡಿಜೆ ವಿಚಾರಕ್ಕಾಗಿಯೂ ಕಲ್ಲು ತೂರಾಟ ನಡೆದಿಲ್ಲ. ಮಸೀದಿಯೊಳಗೆ ಯಾವುದೇ ರಾಡ್ ಆಗಲಿ, ಬೇರೆ ಅಸ್ತ್ರವಾಗಲಿ ಇರಲಿಲ್ಲ. ಆದರೆ ಸಿಸಿಟಿವಿ ದೃಶ್ಯ ಪರಿಶೀಲಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ” ಎಂದು ಹೇಳಿದರು.
“ಮಸೀದಿ ಹೊರಗೆ ಇಟ್ಟಿರುವ ಶೂ ಸ್ಟ್ಯಾಂಡ್(Shoe Rack) ಅಡಿಗೆ ಇರಿಸಿದ್ದ ಎರಡು ಕಲ್ಲುಗಳನ್ನು ತಂಝೀರ್(28) ತೆಗೆದು ಎಸೆದಿದ್ದಾನೆ. ಈ ಕಲ್ಲು ಪೊಲೀಸರ ಮೇಲೆ ಮತ್ತು ಸಾರ್ವಜನಿಕರೊಬ್ಬರ ಮೇಲೆ ಬಿದ್ದಿದೆ. ಕಲ್ಲೆಸೆತದಿಂದ ಯಾವುದೇ ಗಾಯಗಳಾಗಿಲ್ಲ. ನನ್ನ ಮೇಲೆಯೂ ಯಾವುದೇ ರೀತಿಯ ಕಲ್ಲು ಬಿದ್ದಿಲ್ಲ. ಆದರೆ ಕಾರ್ಯಕ್ರಮಕ್ಕೆ ಅಡಚಣೆ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿದ್ಧಾರ್ಥ ಗೋಯಲ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಕಲ್ಲು ತೂರಾಟ ಪೂರ್ವ ನಿಯೋಜಿತವಲ್ಲ. ಅದರಲ್ಲಿ ನನಗೆ ಯಾವುದೇ ಗಾಯಗಳಾಗಿಲ್ಲ. ಆರೋಪಿಯನ್ನು ಬಂಧಿಸಿದ್ದೇವೆ. ಉಳಿದವರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ” ಎಂದು ಹೇಳಿದರು.
ಘಟನೆ ಹಿನ್ನೆಲೆ
ಶಿವಾಜಿ ಜಯಂತಿ ಹಿನ್ನೆಲೆ ನಡೆಯುತ್ತಿದ್ದ ಮೆರವಣಿಗೆ ಸಮಯದಲ್ಲಿ ಕಲ್ಲು ತೋರಾಟ ನಡೆಸಿರುವ ಆರೋಪ ಕೇಳಿಬಂದಿದ್ದು, ಬಾಗಲಕೋಟೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಮರಾಠ ಸಮುದಾಯದಿಂದ ಸಂಜೆ ವೇಳೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕಿಲ್ಲಾದ ಅಂಬಾಭವಾನಿ ದೇವಾಲಯದಿಂದ ಪ್ರಾರಂಭವಾದ ಶಿವಾಜಿ ಮಹಾರಾಜರ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ ಹೊರಟು ಬಸವೇಶ್ವರ ವೃತ್ತದಲ್ಲಿ ಹೋಗಿ ಬಳಿಕ ವಲ್ಲಭಭಾಯಿ ಚೌಕ ಮೂಲಕ ಕಿಲ್ಲಾದಲ್ಲಿ ಮುಕ್ತಾಯವಾಗುತ್ತಿತ್ತು. ಮೆರವಣಿಗೆ ಸಾಗುತ್ತಿದ್ದ ಸಮಯದಲ್ಲಿ ಕಲ್ಲು ತೋರಾಟ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಡೋಪ್ಲಿನ್ ಕಾಂಪ್ಲೆಕ್ಸ್’ ತೆರವು ಪ್ರಕರಣ; ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ
ಈ ಹಿನ್ನೆಲೆಯಲ್ಲಿ ʼದುಷ್ಕರ್ಮಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿರುವುದರಿಂದೆ ಎಸ್‌ಪಿಯವರಿಗೆ ಕಲ್ಲು ತಗುಲಿ ಗಾಯಗೊಂಡಿದ್ದಾರೆ. ಅವರ ಅಂಗಿ ಪೂರ್ತಿ ನೆತ್ತರಿನಿಂದ ತುಂಬಿದೆʼ ಎಂಬಂತಹ ಉದ್ರೇಕದ ಮಾತುಗಳ ವರದಿಯಾಗಿತ್ತು. ಆದರೆ ಎಸ್‌ಪಿಯವರು ಸುದ್ದಿಗೋಷ್ಟಿ ನಡೆಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.





