ಶಾಸಕ ಸುಬ್ಬಾರೆಡ್ಡಿಯವರು ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದರು. ಅವರು ಸರ್ಕಾರಕ್ಕೆ ಏನೇ ಮೋಸ ಮಾಡಿದರೂ ಕೂಡ ಸತ್ಯಕ್ಕೇ ಗೆಲುವು. ನಾವು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದೆವು, ಅದರಂತೆ ನ್ಯಾಯಾಲಯದಲ್ಲಿ ಇವತ್ತು ನಮಗೆ ಜಯ ಸಿಕ್ಕಿದೆ ಎಂದು ಬಾಗೇಪಲ್ಲಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಸಿ ಮುನಿರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಯ್ಕೆಯೇ ಅಸಿಂಧು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
“ನಮ್ಮ ವಕೀಲರ ಜತೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ. ಅವರು ಸುಪ್ರೀಂ ಕೋರ್ಟಿಗೆ ಹೋದರೂ ಕೂಡ ಅಸಿಂಧಿವೇ ಆಗುತ್ತದೆ. ಯಾಕೆಂದರೆ ತಪ್ಪು ತಪ್ಪೇ ಅಲ್ವಾ, ಅಲ್ಲಿಯೂ ತಪ್ಪನ್ನು ಎತ್ತಿ ಹಿಡಿಯುತ್ತಾರೆ. ಹಾಗಾಗಿ ಈಗ ಸುಬ್ಬಾರೆಡ್ಡಿ ಅಸಿಂಧು ಅಲ್ಲ ಅನರ್ಹರಾಗಿದ್ದಾರೆ” ಎಂದರು.
“ಯಾವುದೇ ರಾಜಕಾರಣಿ ಆದರೂ ಮಾಡಿರುವ ತಪ್ಪುಗಳನ್ನು ಮುಚ್ಚಿಕೊಂಡರೇ ಇದೇ ರೀತಿ ಆಗುತ್ತೆ ಇದನ್ನು ಗಮನಿಸಿ ಎಲ್ಲ ರಾಜಕಾರಣಿಗಳು ಅಫಿಡವಿಟ್‌ನಲ್ಲಿ ಸರಿಯಾದ ಮಾಹಿತಿ ಕೊಡಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಅಸಿಂಧು ಎಂದು ತೀರ್ಪು ಬರುತ್ತದೆ. ಮುಂದಿನ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ಗೆ ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.
ಏನಿದು ಪ್ರಕರಣ?
ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷಪೂರಿತವಾಗಿತ್ತೆಂದು ಆರೋಪಿಸಲಾಗಿತ್ತು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 2023 ಮೇ 10ರಂದು ನಡೆದ ಚುನಾವಣೆ ವೇಳೆ ಸಲ್ಲಿಸಿದ್ದ ನಾಮಪತ್ರದಲ್ಲಿ ಬಾಗೇಪಲ್ಲಿಯ ಸದರಿ ನಾಮಪತ್ರದಲ್ಲಿ ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದರು ಮತ್ತು ಆಸ್ತಿಗಳ ತೆರಿಗೆ ಪಾವತಿ ಬಾಕಿ ಕುರಿತು ಮಾಹಿತಿ ನೀಡದೆ ಚುನಾವಣಾ ಅಕ್ರಮ ಎಸಗಿದ್ದಾರೆಂದು ಪರಾಜಿತ ಬಿಜೆಪಿ ಅಭ್ಯರ್ಥಿ ಸಿ ಮುನಿರಾಜು ಆರೋಪ ಮಾಡಿದ್ದರು. ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಯ್ಕೆಯೇ ಅಸಿಂಧು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಇದನ್ನು ಓದಿದ್ದೀರಾ..? ಚಿಮುಲ್ ಮೊದಲ ಅಧ್ಯಕ್ಷರಾಗಿ ಕಾಂಗ್ರೆಸ್‌ನ ವಿ. ಮಂಜುನಾಥ ರೆಡ್ಡಿ ಆಯ್ಕೆ
ನ್ಯಾ. ಎಂಜಿಎಸ್ ಕಮಲ್ ಅವರಿದ್ದ ಪೀಠದಿಂದ ತೀರ್ಪು ಪ್ರಕಟಿಸಲಾಗಿದೆ ಎಸ್ ಎನ್ ಸುಬ್ಬಾರೆಡ್ಡಿ ಆಯ್ಕೆ ಬಗ್ಗೆ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು ಸುಬ್ಬಾರೆಡ್ಡಿ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಈ ಬಗ್ಗೆ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟವಾಗಿದೆ.





