ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಉಂಟಾಗುತ್ತಿರುವ ತಾಂತ್ರಿಕ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಂದ ಶಿಕ್ಷಕರು ಹೈರಾಣಾಗಿದ್ದು, ಸಮಸ್ಯೆಗಳನ್ನು ಸರಿಪಡಿಸಲು ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಎನ್ ಪತ್ರಿ ಅವರಿಗೆ ಗಣತಿದಾರರು ಮನವಿ ಸಲ್ಲಿಸಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಪಿ ವಿ ವೆಂಕಟರಮಣ ಮಾತನಾಡಿ, “ಜಾತಿಗಣತಿ ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸಮೀಕ್ಷೆ ಪೂರ್ಣವಾಗದ ಕಾರಣ ಬೇಸತ್ತು ಸಮೀಕ್ಷೆ ಕೈ ಬಿಟ್ಟು ಇಲ್ಲಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ಬಂದಿದ್ದೇವೆ. ಜಾತಿಗಣತಿ ಸಮೀಕ್ಷೆ ಕಾರ್ಯಕ್ಕೆ ಸಕಲ ಸಿದ್ದತೆ ಕೈಗೊಂಡು ನಮ್ಮನ್ನು ಫೀಲ್ಡ್ ಗೆ ಇಳಿಸಬೇಕಿತ್ತು. ಈಗ ನಾವೇ ಪ್ರಯೋಗಕ್ಕೆ ಒಳಗಾಗುವಂತಾಗಿದೆ. ನಾವು ಮನೆಗಳಿಗೆ ತೆರಳಿ ಅರವತ್ತು- ಅರವತ್ತು ಪ್ರಶ್ನೆ ಕೇಳಿ ಆಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ. ಆದರೆ ಇದಕ್ಕೆ ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದೆ. ಎಲ್ಲವೂ ಫಿಲ್ ಮಾಡಿ ಸಬ್ಮಿಟ್ ಮಾಡಿದಾಗ ಎರರ್ ಬರುತ್ತಿದೆ” ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: ಬಾಗೇಪಲ್ಲಿ | ಡಾ. ಬಿ ಆರ್ ಅಂಬೇಡ್ಕರ್ ಸೇನೆಯ ತಾಲೂಕು ಪದಾಧಿಕಾರಿಗಳ ಆಯ್ಕೆ
“ಎಲ್ಲವೂ ಭರ್ತಿ ಮಾಡಿದ ನಂತರ ಕೊನೆಗೆ ತಪ್ಪು ಬರುತ್ತಿರುವುದರಿಂದ ನಾವು ಮಾಡಿರುವ ಶ್ರಮ ಎಲ್ಲಾ ವ್ಯರ್ಥವಾಗುತ್ತಿದೆ. ಸರಿಯಾಗಿ ಸಿದ್ದತೆ ಮಾಡಿಕೊಳ್ಳದೆ ಸಮೀಕ್ಷೆ ಕೈಗೊಳ್ಳುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಸರಕಾರ ಒದಗಿಸಿರುವ ಆಪ್ ನಲ್ಲಿ ಮನೆಗಳ ಲೊಕೇಷನ್ ತಪ್ಪಾಗಿ ತೋರಿಸುತ್ತಿದೆ. ಪ್ರಮುಖವಾಗಿ ಮೊದಲು ಎಲ್ಲಾ ಗೊಂದಲ ಪರಿಹರಿಸಿ ಟ್ರಯಲ್ ಚೆಕ್ ಮಾಡಿ ನಮ್ಮನ್ನು ಕೆಲಸಕ್ಕೆ ಕಳುಹಿಸಬೇಕಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಣತಿದಾರರು, ಶಿಕ್ಷಕರು, ಹಾಜರಿದ್ದರು.





