ಕೋಲಾರ: ಸರ್ಕಾರಿ ಅಧಿಕಾರಿಗಳು ಜನರ ಪರವಾಗಿ ಪ್ರಾಮಾಣಿಕವಾಗಿ ಸೇವೆ ಮುಂದುವರಿಸಿ ಕ್ರೀಡಾಕೂಟದಲ್ಲಿ ಕ್ರೀಡಾ ಪ್ರತಿಭೆ ಪ್ರದರ್ಶಿಸುವಂತೆ ಸರ್ಕಾರಿ ಕೆಲಸದಲ್ಲೂ ತಮ್ಮ ಪ್ರತಿಭೆ ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಜಿಲ್ಲಾ ಸರ್ಕಾರಿ ನೌಕರರ ಎರಡು ದಿನಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರಿಗೆ ರಜೆ ದಿನಗಳನ್ನು ಬಿಟ್ಟರೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಯ ಸಿಗಲ್ಲ. ಅವರ ಪ್ರತಿಭೆ ಅನಾವರಣಕ್ಕೆ ಈ ಕ್ರೀಡಾಕೂಟ ಸೂಕ್ತ ವೇದಿಕೆ ಕ್ರೀಡಾ ಮನೋಭಾವ ತೋರಲು ಇದೊಂದು ಸದಾವಕಾಶ ಎಂದರು.
ಜಿಲ್ಲೆಯಲ್ಲಿ ೧೭ ಲಕ್ಷ ಜನಸಂಖ್ಯೆ ಇದೆ. ಇದು ಕೃಷಿ ಪ್ರಧಾನ ಜಿಲ್ಲೆ. ರೈತರಿಗೆ ಒಳ್ಳೆಯದು ಮಾಡಿದರೆ ಸರ್ಕಾರಿ ನೌಕರರಿಗೂ ಒಳ್ಳೆಯದು ಆಗುತ್ತದೆ. ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಹೇಳಿದರು.
ಲಕ್ಷಾಂತರ ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿ ತಾವಿದ್ದೀರಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ ಸಿದ್ದರಾಮಯ್ಯ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ಬಡವರಿಗೆ ತಲುಪಿಸಿ ಆ ಕೆಲಸ ಸಮರ್ಪಕವಾಗಿ ನಿರ್ವಹಿಸಿ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕ್ರೀಡೆ ಆರೋಗ್ಯಕ್ಕೆ ಒಳ್ಳೆಯದು ನಾನು ಕೂಡ ಕಬಡ್ಡಿ ಆಟಗಾರ. ಹಿಂದೆ ನಾನು ಕಬಡ್ಡಿಯಲ್ಲಿ ಔಟ್ ಆಗಿದ್ದೆ ಇಲ್ಲ. ರೈಡಿಂಗ್ ನಲ್ಲಿ ಹೊಡೆದು ಕೊಂಡು ಹೋಗಿದ್ದೇ ಹೆಚ್ಚು. ಇದೇ ಕ್ರೀಡಾಂಗಣದಲ್ಲಿ ಗೆದ್ದುಕೊಂಡು ಹೋಗಿದ್ದೆವು ಪುರುಷರಿಗಿಂತ ಮಹಿಳಾ ಕ್ರೀಡಾಪಟುಗಳು ಸ್ಟ್ರಾಂಗ್ ಎಂದು ಹೇಳಿದರು.
ಕ್ರೀಡೆಗೆ ಜಾತಿ ಇಲ್ಲ. ಮಾನವ ಜಾತಿ ಒಂದೇ ಎಲ್ಲರಿಗೂ ಶುಭಾಶಯಗಳು ಎಂದರು.
ಬೈರತಿ ಸುರೇಶ್ ಕ್ರೀಡಾ ಧ್ವಜಾರೋಹಣ ಮಾಡಿದರು. ನಂತರ ಆರೂ ತಾಲ್ಲೂಕುಗಳ ಕ್ರೀಡಾಪಟುಗಳು ಪಂಥ ಸಂಚಲನ ನಡೆಸಿದರು. ಸಚಿವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಬಲೂನ್ ಹಾರಿ ಬಿಟ್ಟರು ಕ್ರೀಡಾಜ್ಯೋತಿಯನ್ನು ಸಚಿವರು ಸ್ವೀಕರಿಸಿದರು. ನಂತರ ಕ್ರೀಡಾಪಟುಗಳ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇದನ್ನು ಓದಿದ್ದೀರಾ..? 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಪ್ರಾಂಶುಪಾಲರು ಅಮಾನತು
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್, ತಹಶೀಲ್ದಾರ್ ಡಾ.ನಯನಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್, ಚೌಡರೆಡ್ಡಿ, ಬೈರೇಗೌಡ, ಮೊಹಮ್ಮದ್ ಹನೀಫ್, ಮೈಲಾಂಡಹಳ್ಳಿ ಮುರಳಿ, ಅರವಿಂದ, ರವಿ, ನರಸಿಂಹಮೂರ್ತಿ, ಎಂ.ನಾಗರಾಜ್, ಕೆ.ಎನ್.ಮಂಜುನಾಥ್, ಸತೀಶ್ ಕುಮಾರ್, ಅನಿಲ್ ಕುಮಾರ್, ಮುರಳಿ ಮೋಹನ್, ರಾಜೇಂದ್ರ ಪ್ರಸಾದ್, ಎನ್.ಶ್ರೀನಿವಾಸ ರೆಡ್ಡಿ, ಸಂಘದ ಪದಾಧಿಕಾರಿಗಳು, ಕ್ರೀಡಾಪಟುಗಳು ಇದ್ದರು. ಎಸ್.ಚೌಡಪ್ಪ ಸ್ವಾಗತಿಸಿದರು.





