ಬನವಾಸಿ: ಗುಡ್ನಾಪುರದಲ್ಲಿರುವ ಶ್ರೀ ಬಂಗಾರೇಶ್ವರ ದೇವಸ್ಥಾನದಲ್ಲಿ ದೇವರ ಮುಂದೆ ಇಟ್ಟಿದ್ದ ಎರಡು ಕಾಣಿಕೆ ಹುಂಡಿಗಳನ್ನು ಮೀಟಿ ತೆಗೆದು, ಅದರಲ್ಲಿದ್ದ ಅಂದಾಜು ₹10,000 ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳು ದೂರಿನಲ್ಲಿ ತಿಳಿಸಿರುವಂತೆ, ಅವರು ದಿನಾಂಕ 02-12-2025 ರಂದು ರಾತ್ರಿ 7:00 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆ ಸಮಯದಲ್ಲಿ ಕಾಣಿಕೆ ಹುಂಡಿಗಳು ಸರಿಯಾದ ಸ್ಥಿತಿಯಲ್ಲಿಯೇ ಇದ್ದವು. ಮರುದಿನ, ಅಂದರೆ ದಿನಾಂಕ 03-12-2025 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ, ದೇವಸ್ಥಾನದ ಪೂಜಾರಿಯವರಾದ ಗಣಪತಿ ಎಮ್ ಶೇಟ್ ಅವರು ಬಂದು ನೋಡಿದಾಗ ಕಾಣಿಕೆ ಡಬ್ಬಿಗಳು ಒಡೆದ ಸ್ಥಿತಿಯಲ್ಲಿ ಇದ್ದಿದ್ದನ್ನು ನೋಡಿ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ,.
ತಕ್ಷಣವೇ ಕಾರ್ಯದರ್ಶಿಗಳು ಉಳಿದ ಸಮಿತಿಯವರಿಗೆ ತಿಳಿಸಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಎರಡು ಕಾಣಿಕೆ ಹುಂಡಿಗಳ ಬೀಗಗಳನ್ನು ಒಡೆದು ಹಣ ಕಳವು ಮಾಡಿರುವುದು ದೃಢಪಟ್ಟಿದೆ. ಆ ಎರಡು ಕಾಣಿಕೆ ಹುಂಡಿಗಳಲ್ಲಿ ಸುಮಾರು ₹10,000 (ಹತ್ತು ಸಾವಿರ ರೂಪಾಯಿ) ಇರುತ್ತಿತ್ತು ಎಂದು ದೇವಸ್ಥಾನದ ಸಮಿತಿಯವರು ಅಂದಾಜಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳಾ ಸಿಬ್ಬಂದಿಗೆ ಜಾತಿ ನಿಂದನೆ; ಪ್ರಕರಣ ದಾಖಲು
ಕಳ್ಳರು ಈ ಕೃತ್ಯವನ್ನು ದಿನಾಂಕ 02-12-2025 ರ ರಾತ್ರಿ 7:00 ಗಂಟೆಯಿಂದ ದಿನಾಂಕ 03-12-2025 ರ ಬೆಳಿಗ್ಗೆ 8:00 ಗಂಟೆಯ ನಡುವಿನ ಅವಧಿಯಲ್ಲಿ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ. ದೂರು ಆಧರಿಸಿ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





