ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯ ವೇಳೆ ಸಮೀಕ್ಷೆ ನಡೆಸದೇ ಇದ್ದರೂ, ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ನಾಲ್ವರು ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ವಲಯದ ಹೊಂಬೇಗೌಡನಗರ ಉಪ ವಿಭಾಗದಲ್ಲಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ಶುಭಾಷಿಣಿ ಅವರನ್ನು ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಭಾಗವಾದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅದೇ ರೀತಿ, ಪಶ್ಚಿಮ ವಲಯದ ಗೋವಿಂದರಾಜನಗರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಮೌಲ್ಯಮಾಪಕರಾದ ಹನುಮಂತರಾಜು ಹಾಗೂ ಪಶ್ಚಿಮ ವಲಯದ ಮತ್ತಿಕೆರೆ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ರಾಮಾಂಜನೇಯಲು ಅವರನ್ನು ಕೂಡ ಅಮಾನತು ಮಾಡಲಾಗಿದೆ.
ಇದನ್ನು ಓದಿದ್ದೀರಾ? ಮನೆಮನೆಗೆ ಪರಿಶಿಷ್ಟ ಜಾತಿ ಸಮೀಕ್ಷೆಯ ಸ್ಟಿಕ್ಕರ್: ನಾಗರಿಕರಿಗೆ ಸ್ಪಷ್ಟೀಕರಣ ನೀಡಿದ ಬಿಬಿಎಂಪಿ
ಆರ್. ಆರ್ ನಗರ ವಲಯದ ಕೆಂಗೇರಿ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ಪ್ರವೀಣ್ ಕುಮಾರ್ ಸಿ.ಎನ್ ರವರನ್ನು ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಭಾಗವಾದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯ ಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯ ವೇಳೆ ಸಮೀಕ್ಷೆ ನಡೆಸದೇ ಇದ್ದರೂ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಈ ಕ್ರಮವನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಕೈಗೊಂಡಿದ್ದಾರೆ.





