ಆರೋಗ್ಯ ನೌಕರರ ಬಗ್ಗೆ ಇರುವ ಗುತ್ತಿಗೆ ಧೋರಣೆಯನ್ನು ಕೈಬಿಟ್ಟು ಸಿಎಚ್‌ಒ ನೌಕರರನ್ನು ಖಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟಿಯುಸಿಐನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸಮುದಾಯ ಆರೋಗ್ಯ ನೌಕರರ ಮುಷ್ಕರ ನಡೆಯಿತು.
ಪ್ರಧಾನ ಕಾರ್ಯದರ್ಶಿ ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ಆರ್ ಮಾನಸಯ್ಯ ಮಾತನಾಡಿ, “ರಾಜ್ಯ ಸರ್ಕಾರ ಸಂಧಾನ ಧೋರಣೆ ಕೈಬಿಟ್ಟು 6,192 ಸಿಎಚ್‌ಒ ನೌಕರರನ್ನು ಖಾಯಂಗೊಳಿಸಬೇಕು” ಎಂದು ಒತ್ತಾಯಿಸಿದರು.

“ಆರೋಗ್ಯ ಇಲಾಖೆ ಇತರೆ ಸಿಬ್ಬಂದಿಗೆ ಚಿಕ್ಕ ವೇತನ ಹೆಚ್ಚಳ ಸಿಎಚ್ಒಗಳಿಗೆ ಸಿಗದಾಗಿದೆ. ಶೇ.15ರಷ್ಟು ವೇತನ ಹೆಚ್ಚಳ ಮಾಡಬೇಕು. ಸುಪ್ರೀಂ ಕೋರ್ಟ್ ತೀರ್ಮಾನ ಉಲ್ಲಂಘಿಸಿ ಗುತ್ತಿಗೆ ಪದ್ಧತಿಯನ್ನು ಸರ್ಕಾರವೇ ಮುಂದುವರಿಸಿರುವುದು ಘೋರ ಅನ್ಯಾಯ. ಜೀವರಕ್ಷಣೆ ಕರ್ತವ್ಯದಲ್ಲಿರುವ ನಮ್ಮ ನೌಕರರ ಜೀವನದ ಬಗ್ಗೆ ಕನಿಷ್ಟ ಕಾಳಜಿ ತೋರದ ಸರ್ಕಾರಕ್ಕೆ ಧಿಕ್ಕಾರ” ಎಂದರು.

“ಸರಣಿ ಸಂಧಾನಗಳು ವಿಫಲಗೊಂಡ ಪರಿಣಾಮವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಕಾಯ್ದೆ ಪ್ರಕಾರ ಮುಂಗಡ ನೋಟಿಸ್ ನೀಡಿಯೇ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿರುವುದರಿಂದ ರಾಜ್ಯದ 6,192 ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳು ಸ್ಥಗಿತಗೊಂಡಿವೆ. ಮುಖ್ಯವಾದ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಮುಷ್ಕರ ಮುಂದುವರಿಸುವ ನಿರ್ಧಾರ ಮೊಳಗಿಸಲಾಗಿದೆ. ಇಲಾಖೆಯಲ್ಲಿ ನೌಕರರ ಮೇಲೆ ನಡೆಯುತ್ತಿರುವ ಚಿತ್ರ ಹಿಂಸೆ ಕಿರುಕುಳ ಲಂಚಗುಳಿತನ ಮುಂತಾದ ವಿಷಯಗಳು ಮುಷ್ಕರದಲ್ಲಿ ಪ್ರಸ್ತಾಪವಾಗಿವೆ. ಈ ಮುಷ್ಕರ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ನಾಳೆಯೂ ಮುಷ್ಕರ ಮುಂದುವರೆಯಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸರ್ಕಾರದಲ್ಲಿ 190 ಔಷಧಿಗಳ ದಾಸ್ತಾನು ಇಲ್ಲ: ಆರೋಗ್ಯ ಸಚಿವ
ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ ಗಂಗಾಧರ, ಸಂಘದ ಅಧ್ಯಕ್ಷ ಮಮಿತ್ ಗಾಯಕ್ವಾಡ, ಉಪಾಧ್ಯಕ್ಷ ಬಸವಾನಂದ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ, ರಾಜ್ಯ ಮುಖಂಡ ಸಂಜೀವ್ ಗಾಂಧಿ, 28 ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು.




