ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ನಡೆಸಲು ಹಣವಿಲ್ಲವೆಂದು ಸರ್ಕಾರ ವಾದ ಮಾಡುತ್ತಿದೆ. ಆದರೆ ವೈದ್ಯಕೀಯ ಕಾಲೇಜು ನಡೆಸಲಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ ಎಂದು ಐಎಂಎ ಕೆಪಿಪಿಎಸ್ ಅಧ್ಯಕ್ಷರು ಹಾಗೂ ಐಎಂಎ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರ ಪ್ರಶ್ನಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶೇ.15ರಷ್ಟು NRI ಕೋಟಾ ಹಿಂಪಡೆಯುವಂತೆ ಆಗ್ರಹಿಸಿ ಭಾನುವಾರ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಬೆಂಗಳೂರು ನಗರದ ಗಾಂಧಿ ಭವನದಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು.
“ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು NRI ಕೋಟಾ ಜಾರಿಗೊಳಿಸುವ ಮೂಲಕ, ಪ್ರತಿ ವೈದ್ಯಕೀಯ ಸೀಟನ್ನು 25 ಲಕ್ಷ ರೂಪಾಯಿಗಳಿಗೆ ನಿಗದಿ ಮಾಡುತ್ತ, ಸೇವೆಯಾದ ವೈದ್ಯಕೀಯ ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣಗೊಳಿಸುವ ಈ ನೀತಿಯನ್ನು ಕೂಡಲೇ ರಾಜ್ಯ ಸರ್ಕಾರ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

“ಹಿಂದೆ ವೈದ್ಯಕೀಯವು ಒಂದು ಸೇವಾ ಕ್ಷೇತ್ರವಾಗಿತ್ತು. ಆದರೆ ವೈದ್ಯಕೀಯ ಶಿಕ್ಷಣದ ಖಾಸಗೀಕರಣದ ಪರಿಣಾಮವಾಗಿ ಇಂದು ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ವ್ಯಾಪಾರ ಸಂಬಂಧವಾಗಿ ಬದಲಾಗುತ್ತಿದೆ. ಇಂದು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶೇ.15 NRI ಕೋಟಾ ತರುವುದರ ಮೂಲಕ ವೈದ್ಯಕೀಯ ಶಿಕ್ಷಣವನ್ನು ಸೂಪರ್ ಪ್ರೈವೆಟೈಸ್ ಮಾಡುವುದು ಸರ್ಕಾರದ ಹುನ್ನಾರವಾಗಿದೆ. NRI ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮುಂದೆ ವೈದ್ಯರಾದಾಗ ಅವರಿಂದ ಸೇವೆಯನ್ನು ಬಯಸಲು ಸಾಧ್ಯವಿಲ್ಲ. ತತ್ಪರಿಣಾಮ ಇದು ಬಡವರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಅಪಾಯ ಹೊಂದಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಖ್ಯಾತ ಮನೋವೈದ್ಯ ಶಶಿಧರ್ ಬಿಳಗಿ ಮಾತನಾಡಿ, “ಲಕ್ಷಾಂತ ರೂಪಾಯಿ ಹಣ ಪಾವತಿಸಿ ವೈದ್ಯರಾಗುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಸೇವೆ ಸಲ್ಲಿಸುವ ಬದಲಾಗಿ ಸಾಮಾನ್ಯ ಜನರಿಂದ ಹಣ ಸುಲಿಗೆ ಮಾಡುವ ದಾರಿ ನೋಡುತ್ತಾರೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು NRI ಕೋಟಾ ತರುವ ಮೂಲಕ ಸಮಾಜಕ್ಕೆ ನಿಜವಾಗಲೂ ಸೇವೆ ಸಲ್ಲಿಸಲು ಆಸಕ್ತರಾಗಿರುವ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಕಸಿದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.

ಎಐಡಿಎಸ್ಓನ ಅಖಿಲ ಭಾರತ ಉಪಾಧ್ಯಕ್ಷ ಮೃದುಲ್ ಸರ್ಕಾರ್ ಮಾತನಾಡಿ, “ದೇಶದಲ್ಲಿ ಪ್ರಥಮ ಬಾರಿಗೆ ಎನ್‌ಆರ್‌ಐ ಕೋಟಾವನ್ನು ಪಶ್ಚಿಮ ಬಂಗಾಳದಲ್ಲಿ ನೀತಿಯನ್ನು ಜಾರಿಗೊಳಿಸಿದಾಗ, ಎಐಡಿಎಸ್ಓ ನೇತೃತ್ವದಲ್ಲಿ ನಡೆದ ಹೋರಾಟದ ಪರಿಣಾಮ ಈ ನೀತಿಯನ್ನು ಹಿಂಪಡೆಯಬೇಕಾಯಿತು. ಅದೇ, ರೀತಿ ಕರ್ನಾಟಕದಲ್ಲಿ 2019ರಂದು ಈ ನೀತಿ ಜಾರಿಗೊಂಡಾಗ ವಿದ್ಯಾರ್ಥಿಗಳ ಹೋರಾಟದಿಂದಾಗಿ ಈ ನೀತಿಯನ್ನು ಹಿಂಪಡೆಯಲು ಸಾಧ್ಯವಾಯಿತು. ಹಣದ ಅಭಾವ ಇರುವ ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್‌ಐ ಕೋಟಾ ತಂದಿರುವುದಾಗಿ ಹೇಳುವ ಸರ್ಕಾರ, ಎಲ್ಲ ಸಚಿವರು ಮತ್ತು ಶಾಸಕರು ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು, ಅವರ ದೋರಣೆಯನ್ನು ತೋರಿಸುತ್ತದೆ” ಎಂದು ದೂರಿದರು.
“ಒಂದೆಡೆ ಭ್ರಷ್ಟಾಚಾರ ಮತ್ತು ದುಂದುವೆಚ್ಚದಲ್ಲಿ ನಿರತರಾಗಿರುವ ಸರ್ಕಾರಗಳು ಇನ್ನೊಂದೆಡೆ ದೇಶದ ಕಾರ್ಪೊರೇಟ್ ಮನೆತಗಳ ತೆರಿಗೆ ಮನ್ನಾ ಮಾಡುತ್ತಿವೆ. ನೀಟ್‌ನಂತಹ ಪರೀಕ್ಷೆಗಳಿಂದ ಕೋಂಚಿಂಗ್ ಕಡ್ಡಾಯವಾಗಿದೆ. ಕೋಚಿಂಗಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡದೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಿಸುವುದು ಅಸಾಧ್ಯ. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಎನ್‌ಇಪಿ-2020 ಮತ್ತು ಎನ್ಎಂಸಿ ನೀತಿಗಳು ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಪಾರೀಕರಣವನ್ನು ಉತ್ತೇಜಿಸುತ್ತವೆ. ವೈದ್ಯಕೀಯ ಕ್ಷೇತ್ರವು ಅನೇಕ ಮಹನೀಯರ ತ್ಯಾಗ ಬಲಿದಾನದ ಮೇಲೆ ಬೆಳೆದಿದೆ. ಮಾನವನ ಏಳಿಗೆಗಾಗಿ ಮೀಸಲಿಡಬೇಕಾದ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರೀಕರಣವನ್ನು ಎತ್ತಿ ಹಿಡಿಯುವ ಈ ನೀತಿಯ ವಿರುದ್ಧ ಹೋರಾಟವನ್ನು ಬಲಪಡಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿರಾ | ಮಕ್ಕಳಿಗಾದರೂ ಮಾಲಿನ್ಯಮುಕ್ತ ಪರಿಸರವನ್ನು ಉಳಿಸಿ : ಮಂಜುನಾಥ್ ಅಮಲಗೊಂದಿ
ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬಿ ಜೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷರುಗಳಾದ ಅಭಯಾ ದಿವಾಕರ್, ಚಂದ್ರಕಲಾ, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಇದ್ದರು.
ವರದಿ : ಎಐಡಿಎಸ್ಓ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್





