ಬೆಂಗಳೂರು ನಗರದ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆಯ ಸಿಬ್ಬಂದಿ ತಂಡ ಪ್ರತಿದಿನವೂ ಶ್ರಮಿಸುತ್ತಿದ್ದು, ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನೂ ಕೈಗೊಳ್ಳಲಾಗಿದೆ. ಇದೆ ಜತೆಗೆ ಸಾರ್ವಜನಿಕರೂ ಕೂಡ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ವಿನಂತಿಸಿದ್ದಾರೆ.
ಬೆಂಗಳೂರು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ಸರ್ವಜ್ಞನಗರ ವಿಭಾಗ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇಮನಾ ಸರ್ಕಲ್(ಬಾಣಸವಾಡಿ)ನಿಂದ ಐಟಿಸಿ ಬ್ರಿಡ್ಜ್‌ವರೆಗೆ 2.7 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 157 ಪೌರಕಾರ್ಮಿಕರು, 1 ಜೆಸಿಬಿ ಹಾಗೂ 5 ಟ್ರ್ಯಾಕ್ಟರ್‌ಗಳಂತಹ ಯಂತ್ರಗಳನ್ನು ಬಳಸಿ ವ್ಯಾಪಕ ಹೂಳು ಮತ್ತು ಕಸ ತೆರವು ಕಾರ್ಯಗಳನ್ನು ಕೈಗೊಳ್ಳಲಾಯಿತು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಹೊಸ ನ್ಯಾಯಬೆಲೆ ಅಂಗಡಿಗಳಿಗಾಗಿ ಅರ್ಜಿ ಆಹ್ವಾನ
ಅಭಿಯಾನದ ಮೂಲಕ 6 ಟನ್ ತ್ಯಾಜ್ಯ ಹಾಗೂ 4.5 ಟನ್ ಕಟ್ಟಡ ಭಗ್ನಾವಶೇಷಗಳು ಸೇರಿದಂತೆ ಒಟ್ಟು 10.5 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ಈ ಕಾರ್ಯದಲ್ಲಿ ಸರ್ವಜ್ಞನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಂಡರು.





