ಹೊಸಕೋಟೆಯ ಏತ ನೀರಾವರಿ ಯೋಜನೆಯ 43 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಯನ್ನು ಅಕ್ಟೋಬರ್ 31ರ ಒಳಗಾಗಿ ಮುಗಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಯೋಜನೆಯ ಕಾಮಗಾರಿಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದರು. ಬಳಿಕ ಕಾಮಗಾರಿಗಳ ಪ್ರಸ್ತುತ ಹಂತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಾಮಗಾರಿ ಅಪೂರ್ಣ, ಅಧಿಕಾರಿಗಳಿಗೆ ತರಾಟೆ
ಹೊಸಕೋಟೆ ಏತ ನೀರಾವರಿ ಯೋಜನೆಯನ್ನು 2022ರ ಸೆಪ್ಟೆಂಬರ್ 28ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಿ ಟೆಂಡರ್ ನೀಡಲಾಗಿತ್ತು. ಆದರೆ, ಅವಧಿ ಮುಗಿದು 10 ತಿಂಗಳು ಕಳೆದಿದೆ. ಕಾಮಗಾರಿಯನ್ನು ನೀಡಿದ್ದ ಸಮಯಾವಕಾಶದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು.
“ಗುತ್ತಿಗೆದಾರರ ಕಾಮಗಾರಿಯನ್ನ ಆಯಾ ಸಮಯದಲ್ಲಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯ. ಕಾಮಗಾರಿ ವೇಗ ಕಡಿಮೆಯಾದಾಗ ಎಚ್ಚರಿಸುವ ಮೂಲಕ ಪೂರ್ಣಗೊಳಿಸುವ ಕಾರ್ಯ ನಡೆಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ಅಕ್ಟೋಬರ್ 31ರ ಒಳಗಾಗಿ ಪೂರ್ಣಗೊಳಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಏತ ನೀರಾವರಿ ಯೋಜನೆಯ ಅಡಿಯಲ್ಲಿನ 2 ಕಿಲೋಮೀಟರ್ ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸಲು ಇದ್ದಂತಹ ಅಡೆತಡೆಗಳನ್ನು ಸಭೆಯಲ್ಲಿ ನಿವಾರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಚರ್ಚ್ ನಿರ್ಮಾಣಕ್ಕೆ ಹಿಂದೂಪರ ಸಂಘಟನೆಗಳ ವಿರೋಧ
“ಇಲಾಖೆಯ ವತಿಯಿಂದ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮವಾರದಿಂದ ಕಾಮಗಾರಿ ಪ್ರಾರಂಭಿಸಬಹುದಾಗಿದೆ” ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಹೇಳಿದರು.
“ಹೆಬ್ಬಾಳ–ನಾಗವಾರ ವ್ಯಾಲಿ ಯೋಜನೆಯ ಬಾಕಿ ಕಾಮಗಾರಿಗಳ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಸೆಪ್ಟೆಂಬರ್ 15ರಂದು ಮತ್ತೊಮ್ಮೆ ಕಾಮಗಾರಿ ಪರಿಶೀಲನೆ ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದರು.




