ಬೆಂಗಳೂರು ನಗರದ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗವನ್ನು ಕಲ್ಪಿಸುವ ಸಲುವಾಗಿ ಬಿಬಿಎಂಪಿ ವತಿಯಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಲಯ ಆಯುಕ್ತ ಸತೀಶ್ ಬಿ ಸಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಮುಖ್ಯ ಆಯುಕ್ತರ ನಿರ್ದೇಶನದಂತೆ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಹಾಗೂ 2ನೇ ಮತ್ತು 4ನೇ ಶುಕ್ರವಾರದಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದ್ದು, ಇದರ ಮುಂದುವರೆದ ಭಾಗವಾಗಿ ಇದೇ ಜುಲೈ 11ನೇ ತಾರೀಕಿನಂದು ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ʼರಾಜರಾಜೇಶ್ವರಿನಗರ ವಿಭಾಗದ ವಾರ್ಡ್ ಸಂಖ್ಯೆ-160 ರ ಬಿಇಎಂಎಲ್ ಕಾಂಪ್ಲೆಕ್ಸ್ (ಮಂದಾರ ರೆಸ್ಟೋರೆಂಟ್) ನಿಂದ ಬಿಎಂಟಿಸಿ ಬಸ್ ಡಿಪೋವರೆಗಿನ ಮುಖ್ಯರಸ್ತೆ ಪಾದಚಾರಿ ಮಾರ್ಗʼ ಹಾಗೂ ʼಕೆಂಗೇರಿ ವಿಭಾಗದ ವಾರ್ಡ್ ಸಂಖ್ಯೆ-130ರ ದೀಪಾ ಕಾಂಪ್ಲೆಕ್ಸ್ ನಿಂದ ಮುದ್ದಿನಪಾಳ್ಯ ವೃತ್ತದವರೆಗಿನ ಮುಖ್ಯರಸ್ತೆʼ ವಲಯಗಳಲ್ಲಿ ಅನಧಿಕೃತ ಒತ್ತುವರಿಯನ್ನು ಬಿಬಿಎಂಪಿ ವತಿಯಿಂದ ನಿರ್ದಾಕ್ಷ್ಯಿಣವಾಗಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು” ಎಂದಿದ್ದಾರೆ.
“ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಗೆ ಒಳಪಡುವ ವಿವಿಧ ಪ್ರದೇಶಗಳಲ್ಲಿ ಒತ್ತುವರಿ ಮಾಡಿರುವ ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳು ಹಾಗೂ ಇನ್ನಿತರ ಅನಧಿಕೃತ ಪಾದಚಾರಿ ಮಾರ್ಗ ಒತ್ತುವರಿದಾರರು ಅತಿಕ್ರಮಿಸಿರುವ ಪಾದಚಾರಿ ಮಾರ್ಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಈ ಮೂಲಕ ತಿಳಿಯಪಡಿಸಿದೆ. ಪಾದಚಾರಿ ಮಾರ್ಗ ಒತ್ತುವರಿಯನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸದಿದ್ದಲ್ಲಿ ಬಿಬಿಎಂಪಿ ವತಿಯಿಂದ ಒತ್ತುವರಿ ತೆರವುಗೊಳಿಸಿ ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ರೇಬಿಸ್ ನಿರ್ಮೂಲನೆಗಾಗಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ





