ಪ್ಯಾರಿಸ್‌ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಏರ್ ಫ್ರಾನ್ಸ್-194 ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆಂಧ್ರಪ್ರದೇಶ ಮೂಲದ ವೆಂಕಟ್ ಮೋಹಿತ್ ಆಚಾರಿ (29) ಎಂದು ತಿಳಿದುಬಂದಿದೆ. ಜುಲೈ 15ರ ರಾತ್ರಿ ಈ ಘಟನೆ ನಡೆದಿದ್ದು, ಈ ಕುರಿತು ವಿಮಾನದ ಸಿಬ್ಬಂದಿ ಸಲ್ಲಿಸಿದ್ದ ವರದಿ ಆಧಾರದ ಮೇರೆಗೆ ವಿಮಾನ ನಿಲ್ದಾಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣದಂಡನೆ ವಿಧಿಸಲು ಅವಕಾಶವಿದೆ: ನ್ಯಾ. ರಾಜೇಶ್ವರಿ
“ಪ್ಯಾರಿಸ್‌ನಿಂದ ಬೆಂಗಳೂರಿಗೆ ಆಗಮಿಸುವ ವೇಳೆ ಆರೋಪಿಯು ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಕೆಲಹೊತ್ತು ಆತಂಕಕ್ಕೀಡಾಗಿದ್ದರು. ಆರೋಪಿಯು ಮದ್ಯಪಾನ ಮಾಡಿರಲಿಲ್ಲ. ಆದರೆ, ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.




