ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ದೀಪಾವಳಿ ಸಂದರ್ಭದಲ್ಲಿ ಪರಿಸರಸ್ನೇಹಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ ಬಿ ಬಸವರಾಜು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಮಾರಾಟ ಸುರಕ್ಷತಾ ಸಭೆಯಲ್ಲಿ ಮಾತನಾಡಿದ ಅವರು, “ಹಸಿರು ಪಟಾಕಿ ಬಿಟ್ಟು ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ” ಎಂದು ಹೇಳಿದರು.
“ಪಟಾಕಿ ಮಾರಾಟಗಾರರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸುರಕ್ಷತಾ ಕ್ರಮ ಅನುಸರಿಸಿದರೆ ಮಾತ್ರ ಪರವಾನಗಿ ನೀಡಲಾಗುವುದು” ಎಂದರು.
“ಜಿಲ್ಲೆಯಲ್ಲಿ ಹಸಿರು ಪಟಾಕಿಯಲ್ಲದೆ ನಿಷೇಧಿತ ಪಟಾಕಿಗಳ ಉತ್ಪಾದನೆ, ದಾಸ್ತಾನು ಮತ್ತು ಮಾರಾಟ ಮಾಡುವಂತಿಲ್ಲ. ಮಳಿಗೆಗಳಲ್ಲಿ ಅನಧಿಕೃತವಾಗಿ ಪಟಾಕಿ ದಾಸ್ತಾನು ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಇಡೀ ಗೋದಾಮು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಪಟಾಕಿ ದಾಸ್ತಾನು, ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಪೊಲೀಸರು ಎಲ್ಲ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ನಡೆಸಬೇಕು. ಪಟಾಕಿ ದುರಂತ ಸಂಭವಿಸದಂತೆ ಪಟಾಕಿ ಮಾರಾಟಗಾರರು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮ ವಹಿಸಬೇಕು” ಎಂದು ಸಲಹೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮುಂದುವರೆದ ಧರಣಿ ಸತ್ಯಾಗ್ರಹ; ಅತಿವೃಷ್ಟಿ ಹಾನಿಗೆ ಶೀಘ್ರ ಪರಿಹಾರಕ್ಕೆ ಪ್ರಗತಿಪರರ ಆಗ್ರಹ
ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧಿಸಿದೆ.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಡಿವೈಎಸ್‌ಪಿ ರವಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದ್ದರು.





