ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ರುಂಡ, ಕೈ-ಕಾಲು ಕತ್ತರಿಸಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಬಳಿ ನಡೆದಿದೆ.
ಬನ್ನೇರುಘಟ್ಟದ ಜನತಾ ಕಾಲೋನಿಯ ಗೀತಮ್ಮ ಹತ್ಯೆಯಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಕೈ-ಕಾಲು ಮತ್ತು ತಲೆಯನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆ. ನಗ್ನ ಮುಂಡವನ್ನು ಮಾತ್ರ ಗೋಣಿ ಚೀಲದಲ್ಲಿ ಹಾಕಿ, ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಮನೆಯ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಅನುಮಾನಗೊಂಡ ನೆರೆಹೊರೆಯವರು ಮನೆಯನ್ನು ಪರಿಶೀಲಿಸಿದಾಗ ಮುಂಡ ಮತ್ತೆಯಾಗಿದೆ.
ಗೀತಮ್ಮ ಖಾಸಗಿ ಕಂಪನಿಯೊಂದರಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತಮ್ಮ ಮನೆಯ ಎರಡು ಪೋರ್ಷನ್‌ಗಳನ್ನು ಯುವಕರಿಗೆ ಬಾಡಿಗೆ ನೀಡಿದ್ದರು. ಆ ಯುವಕರ ಪೋನ್‌ಗಳು ಸ್ವಿಚ್‌ಆಫ್ ಆಗಿದ್ದು, ಅವರೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಕೃತ್ಯ ಎಸಗಿ ಮೂರು ದಿನಗಳಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. “ಹತ್ಯೆಯ ಬಗ್ಗೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಕೃತ್ಯಕ್ಕೆ ಕಾರಣವೇನು ಎಂಬುದು ತನಿಖೆ ನಂತರ ತಿಳಿಯಲಿದೆ” ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.




