ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನೀರಿನ ಮೂಲ ನದಿ, ಕೆರೆಗಳನ್ನು ಹಾಳು ಮಾಡಲಾಗುತ್ತಿದೆ. ಕರೆ ನೀರನ್ನು ಕಲಿಷಿತಗೊಳಿಸಿ, ಕೊಳಚೆ ನೀರು, ಕಸವನ್ನು ಹರಿಸಲಾಗುತ್ತಿದೆ. ನಗರದ ಜನರು ಈಗಲೂ ಎಚ್ಚರವಹಿಸಲಿದ್ದರೆ, ನೀರಿನ ಮೂಲಗಳು ಹಾಳಾಗುತ್ತವೆ ಎಂದು ‘ಸಂವಾದ’ ತಂಡ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಸಂವಾದ, ಯುವ ಮುನ್ನಡೆ ತಂಡಗಳು ‘ಪರಿಸರ ನ್ಯಾಯಕ್ಕಾಗಿ ಯುವಧ್ವನಿ, ವೃಷಭಾವತಿ ನದಿ ಉಳಿಸೋಣ’ ಹೆಸರಿನಲ್ಲಿ ಆಂದೋಲನ ನಡೆಸುತ್ತಿದೆ. ಇತ್ತೀಚೆಗೆ, ಮಲ್ಲೆಶ್ವರಂ, ಮಂತ್ರಿ ಮಾಲ್, ಸ್ಯಾಂಕಿಟ್ಯಾಕ್, ಕಾಡು ಮಲ್ಲೇಶ್ವರಂ, ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ, ಕೆಂಗೇರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮಾತ್ರವಲ್ಲದೆ, ನೀರಿನ ಮೂಲಗಳ ರಕ್ಷಣೆಗಾಗಿ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರಗಳನ್ನೂ ಸಲ್ಲಿಸಿದ್ದಾರೆ.
ಮಲ್ಲೇಶ್ವರಂನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂದೋಲನಕ್ಕೆ ಸಾಮಾಜಿಕ ಚಿಂತಕ, ಉಪನ್ಯಾಸಕ, ಜಾನಪದ ಅಕಾಡೆಮಿ ಸದಸ್ಯ ಹುಲಿಕುಂಟೆಮೂರ್ತಿ ಚಾಲನೆ ನೀಡಿ ಮಾತನಾಡಿದ್ದಾರೆ. “ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

“ವೃಷಭಾವತಿ ನದಿಯ ದಡದಲ್ಲಿ ಬೆಂಗಳೂರು ನಿರ್ಮಾಣವಾಗಿದೆ. ವೃಷಭಾವತಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ಆದರೆ, ಈ ವಿಚಾರ ಎಷ್ಟು ಮಂದಿಗೆ ಗೊತ್ತಿರಲು ಸಾಧ್ಯ. ಇಂದು ಆಧುನಿಕತೆ ಹಾಗೂ ಜಾಗತೀಕರಣಕ್ಕೆ ತುತ್ತಾಗಿರುವ ಬೆಂಗಳೂರಿನಲ್ಲಿ ನದಿಮೂಲಗಳು ಕಾಣೆಯಾಗಿವೆ. ಇದಿರಂದಾಗಿ ಬೆಂಗಳೂರಿನಲ್ಲಿ ನೀರಿಗೆ, ಪರಿಸರಕ್ಕೆ ಸಂಬಂಧಿಸಿದಂತೆ ಏನೆಲ್ಲ ಸಮಸ್ಯೆಗಳಾಗುತ್ತಿವೆ ಎಂಬುದರ ಕುರಿತು ನಿಧಾನವಾಗಿ ಅರಿವಿಗೆ ಬರುತ್ತದೆ. ಈ ವಿಚಾರವನ್ನು ಯುವಜನತೆಗೆ ತಲುಪಿಸುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
“ನದಿಗಳಿಗೆ, ಪರಿಸರಕ್ಕೆ ಪರ್ಯಾಯವನ್ನು ಹುಡುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ಬಗ್ಗೆ ಯುವಮುನ್ನಡೆಯ ಕಾರ್ಯಕರ್ತರು, ವೃಷಭಾವತಿ ನದಿ ಉಳಿವಿಗಾಗಿ ಅಭಿಯಾನವನ್ನು ಆರಂಭಿಸಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಅಭಿಯಾನಕ್ಕೆ ಬೆಂಗಳೂರಿನ ಎಲ್ಲ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಬೇಕು” ಎಂದು ಕರೆಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಾತಲಿಂಗಪ್ಪ, ಸಂವಾದ ಸಂಸ್ಥೆಯ ಇಳಂಗೊ ಸ್ಟಾನಿಸ್ಲಾಸ್, ಸಂಸ್ಥೆಯ ಸಿಬ್ಬಂಧಿಗಳು, ಹಾಗೂ ಯುವಮುನ್ನಡೆ ಕಾರ್ಯಕರ್ತರಾದ ಉದಯ್‌ಕಿರಣ್, ಶ್ರೀನಿವಾಸ್, ಅರ್ಪಿತಾ, ಮರಿಯಮ್ಮ, ಯೋಗೇಶ್, ಆಶಾ, ಬೀರಪ್ಪ, ಸುಹಾಸ್, ರಾಹುಲ್, ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.




