ಕೆಎಸ್‌ಆರ್‌ಟಿಸಿ ಬಸ್ ಚಕ್ರ ಹರಿದು ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಬೆಂಗಳೂರಿನ ನಾಗಸಂದ್ರದ ನಿವಾಸಿ ರಾಜೇಂದ್ರ(50) ಎಂದು ಗುರುತಿಸಲಾಗಿದೆ. ನೆಲಮಂಗಲದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಂದ್ರ, ಕೆಲಸದ ನಿಮಿತ್ತ ಬೆಳಿಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಜಿಎಸ್‍ಟಿ ಕಚೇರಿಗೆ ತೆರಳುತ್ತಿದ್ದರು. ಇದೇ ವೇಳೆ ಅವರ ಬಲಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ಕೆಳಕ್ಕೆ ಬಿದ್ದಿದ್ದರು.
ರಾಜೇಂದ್ರ ಅವರು ಕೆಳಕ್ಕೆ ಬಿದ್ದ ಕೂಡಲೇ ಅವರ ತಲೆ ಮೇಲೆ ಬಸ್‍ನ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಫೆ.13ರಂದು ಮಸಣ ಕಾರ್ಮಿಕರ ಪ್ರತಿಭಟನೆ
ವಿಷಯ ತಿಳಿದು ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದು, ಬಸ್ಸನ್ನು ತಮ್ಮ ಸುಪರ್ದಿಗೆ ಪಡೆದಿರುವುದಾಗಿ ಬೆಂಗಳೂರು ಸಂಚಾರ ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಡಿ ಆರ್ ತಿಳಿಸಿದ್ದಾರೆ.





