ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯೊಬ್ಬಳ ಭೀಕರ ಹತ್ಯೆ ನಡೆದಿರುವುದನ್ನು ಭೇದಿಸಿರುವ ಪೊಲೀಸರು, ಹಲವು ದಿನಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ ನೆರೆಹೊರೆಯವನೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಘ್ನೇಶ್ ಅಲಿಯಾಸ್ ಸಂಜಯ್(26) ಮತ್ತು ಆತನ ಸ್ನೇಹಿತ ದಿನಗೂಲಿ ಕೆಲಸಗಾರ ಹರೀಶ್(30) ಎಂಬ ಆರೋಪಿಗಳನ್ನು ಬೆಂಗಳೂರಿನ ವಾಯುವ್ಯದಲ್ಲಿರುವ ಸೋಲದೇವನಹಳ್ಳಿಯಲ್ಲಿ ಬಂಧಿಸಿರುವುದಾಗಿ ಶ್ರೀರಾಂಪುರ ಪೊಲೀಸರು ಘೋಷಿಸಿದ್ದಾರೆ.
ಇಬ್ಬರು ಆರೋಪಿಗಳ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್ ಬಳಿ ಗುರುವಾರ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ಯಾಮಿನಿ ಪ್ರಿಯಾ(20) ಅವರನ್ನು ಆರೋಪಿಗಳು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಾಡಹಗಲೇ ಕೊಲೆ ಮಾಡಲಾಗಿದೆ. ಅವರು ಬನಶಂಕರಿಯ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮ ವ್ಯಾಸಂಗ ಮಾಡುತ್ತಿದ್ದರು.
ಉಪ ಪೊಲೀಸ್ ಆಯುಕ್ತ(ಉತ್ತರ) ಬಿ ಎಸ್ ನೇಮಗೌಡ ಅವರು ತನಿಖೆಗಳನ್ನು ಉಲ್ಲೇಖಿಸಿ, “ಆರೋಪಿ ವಿಘ್ನೇಶ್ ಯಾಮಿನಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಆದರೆ ಅವಳು ಅವನ ಪ್ರಸ್ತಾಪವನ್ನು ಪದೇ ಪದೆ ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಅವನು ಹರೀಶ್ ಎಂಬಾತನ ಸಹಾಯದಿಂದ ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದು, ಆ ವ್ಯಕ್ತಿಗಳು ಸ್ಥಳೀಯ ಅಂಗಡಿಯಿಂದ ಚಾಕುವನ್ನೂ ಖರೀದಿಸಿದ್ದರು” ಎಂದು ಪೊಲೀಸರು ಹೇಳಿದ್ದಾರೆ.
“ಹರೀಶ್ ಎಂಬಾತ ವಿಘ್ನೇಶ್ ಮೋಟಾರ್‌ಬೈಕ್‌ನಲ್ಲಿ ಸ್ಥಳಕ್ಕೆ ತಲುಪುವಂತೆ ಸಹಾಯ ಮಾಡಿದ್ದೂ ಅಲ್ಲದೆ, ಮತ್ತೊಂದು ದ್ವಿಚಕ್ರ ವಾಹನದಲ್ಲಿ ಕುಳಿತು ʼಕೆಲಸ ಮುಗಿಸಲುʼ ಕಾಯುತ್ತಿದ್ದ. ನಂತರ ಅವನು ಸೋಲದೇವನಹಳ್ಳಿಯ ಕಾಲೇಜಿನ ಬಳಿ ಆರೋಪಿ ವಿಘ್ನೇಶನಿಗೆ ಆಶ್ರಯ ನೀಡಿದ್ದನೆಂದು ತಿಳಿದುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಅಪರಾಧಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಿಘ್ನೇಶ್ ಆಕೆಯ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ‘ಮಿಷನ್ ಯಾಮಿನಿ ಪ್ರಿಯಾ’ ಎಂಬ ವಾಟ್ಸ್ಯಾಪ್ ಗುಂಪನ್ನೂ ಕೂಡ ರಚಿಸಿದ್ದು, ಆಕೆಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಅವನು ತನ್ನ ಐವರು ಸ್ನೇಹಿತರನ್ನು ಗುಂಪಿಗೆ ಸೇರಿಸಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾಮಿನಿಯ ತಾಯಿ ವರಲಕ್ಷ್ಮಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ತನ್ನ ಮಗಳನ್ನು ನಿರ್ದಯವಾಗಿ ಕೊಂದಿದ್ದಾರೆ. ಶಂಕಿತನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕು” ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ಮಾಡಲಾಯಿತು.
ಕರ್ನಾಟಕದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು ಮತ್ತು ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸರ್ಕಾರಗಳಾಗಲೀ ಯಾವುದೇ ಇತರೆ ಪಕ್ಷಗಳ ಜನಪ್ರತಿನಿಧಿಗಳಾಗಲೀ ಗಮನಹರಿಸುತ್ತಿಲ್ಲ. ಮಹಿಳಾ ಆಯೋಗ ಇದ್ದರೂ ಕೂಡ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.
ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಕಳೆದ ಮೂರು ವರ್ಷಗಳಲ್ಲಿ ಶೇ.40ರಷ್ಟು ಹೆಚ್ಚಳವಾಗಿವೆ. 2024-2025ರಲ್ಲಿ ಸುಮಾರು 72,000 ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ತೀರ್ಪುಗಳ ಪ್ರಮಾಣ ಕಡಿಮೆಯಾಗಿದ್ದು, ಶೇ.92ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಇದಕ್ಕೆ ಕಳಪೆ ಗುಣಮಟ್ಟದ ತನಿಖೆ ಮತ್ತು ಕಾನೂನು ಕ್ರಮದಲ್ಲಿ ಕೊರತೆ ಉಂಟಾಗಿರುವುದು ಎದ್ದು ಕಾಣುತ್ತಿದೆ.
ಇದನ್ನೂ ಓದಿದ್ದೀರಾ? ಬೆಳಗಾವಿ : ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆ ಮಾಡಿದ ಪೊಲೀಸ್ ಪೇದೆ
2024-25ರಲ್ಲಿ 685 ಮಂದಿ ಬಾಲಕಿಯರು ಬಲಿಪಶುಗಳಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಳವಾಗಿವೆ, 2022ರಲ್ಲಿ 2,411 ಪ್ರಕರಣಗಳು ದಾಖಲಾಗಿರುವುದಾಗಿ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ರಾಜ್ಯಾದ್ಯಂತ ಕಳೆದ ನಾಲ್ಕು ತಿಂಗಳಲ್ಲಿ 979 ಲೈಂಗಿಕ ದೌರ್ಜನ್ಯ ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 114ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಅಧಿಕೃತ ದತ್ತಾಂಶ ಮತ್ತು ಮಾಧ್ಯಮ ವರದಿಗಳಿಂದ ಸಾಬೀತಾಗಿದೆ.
“ಆರೆಸ್ಸೆಸ್ ಕಾರ್ಯಕ್ರಮಗಳನ್ನು ನಡೆಸುವ ಕುರಿತಾಗಿ ಉತ್ಸಾಹ ತೋರಿರುವ ಕೆಲವರು ಹಾಗೂ ಬಿಜೆಪಿ ನಾಯಕರು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅತ್ಯಾಚಾರಗಳನ್ನು ತಡೆಗಟ್ಟುವ ಕುರಿತು ಧ್ವನಿ ಎತ್ತುವುದೂ ಇಲ್ಲ, ಯಾವುದೇ ಹೋರಾಟ ಮತ್ತು ಪ್ರತಿಭಟನೆಗಳನ್ನೂ ಕೈಗೊಳ್ಳುವುದಿಲ್ಲ. ನಾವೆಲ್ಲರೂ ಹಿಂದೂ ಧರ್ಮದ ಸಂರಕ್ಷರೆಂದು ಹೇಳಿಕೊಳ್ಳುತ್ತಿದ್ದಾರೆಯೇ ಹೊರತು, ಇದೇ ನೆಲದ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರಗಳನ್ನು ತಡೆಯುವಲ್ಲಿ ಮುಂದಾಗುತ್ತಿಲ್ಲ”ವೆಂಬುದು ಸಾರ್ವಜನಿಕರ ಆಕ್ರೋಶವಾಗಿದೆ.





