“ಮಣ್ಣಲ್ಲಿ ಕೈಗಳು-ಮನಸ್ಸಲ್ಲಿ ಭಾರತ” ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿರುವ ಅಭಿಯಾನದ ಅಂಗವಾಗಿ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್ (ಸಿಐಒ) ಜಯನಗರ ಘಟಕದ ವತಿಯಿಂದ ಮಕ್ಕಳು ತಿಲಕನಗರ ವ್ಯಾಪ್ತಿಯಲ್ಲಿ ಶಾಲೆ, ದೇವಸ್ಥಾನ, ಚರ್ಚ್, ಮಸೀದಿ, ಪೊಲೀಸ್ ಠಾಣೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ತಿಲಕ್ ನಗರ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟ ಸಿಐಒ ಮಕ್ಕಳ ತಂಡ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ವಿಶ್ವನಾಥ್, ಎಎಸ್ಐ ಸದ್ದಾಂ ಹುಸೇನ್, ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಸಸಿಗಳನ್ನು ಕೊಟ್ಟು ಪರಿಸರ ಉಳಿಸುವ ಸಂದೇಶ ನೀಡಿದರು. ಮಕ್ಕಳ ಪರಿಸರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ಸಿಹಿ ನೀಡಿ ಅಭಿನಂದಿಸಿದರು.

ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಮಕ್ಕಳು ದೇವಸ್ಥಾನದ ಬಿ. ಪಳಿನಿ, ವೈ. ರಾಧಾಕೃಷ್ಣ ಅವರನ್ನು ಭೇಟಿ ಮಾಡಿ ಸಸಿಗಳನ್ನು ವಿತರಿಸಿದರು.
ಈಟನ್ ಮೆಮೋರಿಯಲ್ ಚರ್ಚ್‌ಗೆ ತೆರಳಿ ಚರ್ಚ್‌ನ ಫಾದರ್ ಅವರಿಗೆ ಸಸಿಗಳನ್ನು ನೀಡಲಾಯಿತು. ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಸಿಸ್ಟರ್ ರೆನ್ನಿ ಡಿಸೋಜಾ, ಶಿಕ್ಷಕಿ ವಿಮಲಾ ಅವರನ್ನು ಭೇಟಿ ಮಾಡಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ರೇನ್ ಟ್ರೀ ಶಾಲೆಯಲ್ಲಿ ಶಿಕ್ಷಕಿಯರಾದ ನಾಜಿಯಾ, ಸುಹಾಸಿನಿ, ಅಂಜುಮ್ ಅವರನ್ನು ಭೇಟಿ ನೀಡಿ ಸಸಿಗಳನ್ನು ನೀಡಲಾಯಿತು. ಇದೇ ವೇಳೆ ಹುಸ್ನಾ ಮಸೀದಿಯ ಮೌಲ್ವಿ ಅಬ್ದುಲ್ ರಹೀಮ್ ಸಂಜಾರ್ ಅವರನ್ನು ಭೇಟಿ ಮಾಡಿದ ಮಕ್ಕಳು ಸಸಿಗಳನ್ನು ನೀಡಿ ಪರಿಸರ ಉಳಿಸುವ ಸಂದೇಶ ನೀಡಿದರು.
ಈ ವೇಳೆ ಸಿಐಒ ಮಾರ್ಗದರ್ಶಕಿ ಇಶ್ರತುನ್ನಿಸಾ, ಜೆಐಎಚ್ ಮಹಿಳಾ ಘಟಕದ ಸಂಚಾಲಕಿ ಮುಸದ್ದಿಖಾ ಸೇರಿದಂತೆ ಹೊಣೆಗಾರರು, ಮಕ್ಕಳ ಪೋಷಕರು ಇದ್ದರು.











