ರಬ್ಬರ್ ತೋಟದಲ್ಲಿ ಅಳವಡಿಸಿದ್ದ ತಡೆಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯ ಮರಿಯೊಂದನ್ನು ಅರಣ್ಯಾಧಿಕಾರಿಗಳು ಅರಿವಳಿಕೆ ನೀಡಿ ರಕ್ಷಿಸಿದ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂರ್ಜೆ ಸಮೀಪದ ಕೊಳಕೆಬೈಲು ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಅಂದಾಜು 8ರಿಂದ 10 ತಿಂಗಳು ಇರುವ ಚಿರತೆಯ ಮರಿಯೊಂದು ಆಹಾರ ಹುಡುಕಿಕೊಂಡು ಮೂರ್ಜೆ ಸಮೀಪದ ಕೊಳಕೆಬೈಲು ಎಂಬಲ್ಲಿರುವ ಕೇರಳ ಮೂಲದ ವ್ಯಕ್ತಿಯೋರ್ವರ ತೋಟಕ್ಕೆ ಬಂದಿದೆ. ಆದರೆ, ಓಡಾಡುವ ಭರದಲ್ಲಿ ತಂತಿ ಇರುವ ತಡೆಬೇಲಿಗೆ ಸಿಲುಕಿಕೊಂಡಿತ್ತು. ಗುರುವಾರ ಬೆಳಗ್ಗೆ ಕೆಲಸಕ್ಕೆಂದು ತೋಟಕ್ಕೆ ಬಂದಿದ್ದವರು ಗಮನಿಸಿದ್ದು, ಕೂಡಲೇ ವೇಣೂರು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಅರಿವಳಿಕೆ ತಜ್ಞೆ ಡಾ. ಯಶಸ್ವಿನಿ ಅವರ ಮೂಲಕ ಅರಿವಳಿಕೆ ಮದ್ದು ನೀಡಿ, ರಕ್ಷಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿರುವ ವೇಣೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ(RFO) ಭರತ್ ಅವರು, “ಗುರುವಾರ ಬೆಳಗ್ಗೆ 9ರ ಸುಮಾರಿಗೆ ಚಿರತೆ ತಡೆಬೇಲಿಯಲ್ಲಿ ಸಿಕ್ಕಿಕೊಂಡಿರುವುದಾಗಿ ನಮಗೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ತಂಡದೊಂದಿಗೆ ತೆರಳಿ, ಅರಿವಳಿಕೆ ಮದ್ದು ನೀಡಿ ರಕ್ಷಿಸಲಾಗಿದೆ. ಸದ್ಯ ನಯನಾಡುವಿನಲ್ಲಿರುವ ಅರಣ್ಯ ಇಲಾಖೆಯ ಕೇಂದ್ರದಲ್ಲಿ ಇಟ್ಟು ಅದರ ಆರೋಗ್ಯವನ್ನು ಡಾ. ಯಶಸ್ವಿನಿಯವರು ಪರಿಶೀಲಿಸಿದ್ದು, ಯಾವುದೇ ಗಂಭೀರ ಗಾಯಕಂಡುಬಂದಿಲ್ಲ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ” ಎಂದು ತಿಳಿಸಿದರು.
“ಚಿರತೆಗೆ ಅಂದಾಜು 8ರಿಂದ 10 ತಿಂಗಳು ಅಥವಾ ಎರಡು ವರ್ಷ ಪ್ರಾಯವಿರಬಹುದು. ಮೂಡಬಿದ್ರೆ ಎಸಿಎಫ್ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಚಿರತೆಯ ಮರಿಯನ್ನು ಮತ್ತೆ ಕಾಡಿಗೆ ಬಿಡಬೇಕೋ ಅಥವಾ ಪಿಲಿಕುಳ ವನ್ಯಜೀವಿ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ” ಎಂದು ವೇಣೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಭರತ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್ ಪ್ರತಿಭಟನೆಗಳು- ಪಶ್ಚಿಮ ಮಾಧ್ಯಮಗಳ ಹುಸಿ ಕಥಾನಕಗಳು ಮತ್ತು ಹಸಿ ವಾಸ್ತವಗಳು
ಕಾರ್ಯಾಚರಣೆಯಲ್ಲಿ ಅರಿವಳಿಕೆ ತಜ್ಞೆ ಡಾ. ಯಶಸ್ವಿನಿ, ಡಿವೈಆರ್‌ಎಫ್ ಅಶ್ವಿತ್, ವೇಣೂರು ಪ್ರಾದೇಶಿಕ ವಲಯದ ಬೀಟ್ ಗಾರ್ಡ್‌ಗಳಾದ ಸುರೇಶ್, ದಿವಾಕರ್ ಸೇರಿದಂತೆ ಕೇರ್ ವೈಲ್ಡ್ ಲೈಫ್ ರೆಸ್ಕ್ಯೂ ಟೀಮ್‌ನ ಸಿಬ್ಬಂದಿಗಳು ಭಾಗವಹಿಸಿದ್ದರು.





