ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ಸರ್ಕಾರಿ ಶಾಲೆಯ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆಯೊಂದು, ದಾನಿಗಳ ನೆರವಿನಿಂದ ಎರಡು ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದ್ದಾರೆ.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್(ಎಸ್ಐಓ) ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳು ಎದುರಿಸುತ್ತಿದ್ದ ಶೌಚಾಲಯ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ದಾನಿಗಳಿಂದ ಸಂಗ್ರಹಿಸಿದ ಸುಮಾರು 56 ಸಾವಿರ ಮೊತ್ತದ ನೆರವಿನಿಂದ ಸುಸಜ್ಜಿತವಾದ ಎರಡು ಶೌಚಾಲಯವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್ಐಓ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್ಐಓ ಪದಾಧಿಕಾರಿಗಳು ತೆರಳಿ, ಗಿಫ್ಟ್ ಕೊಟ್ಟು ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಅಭಿಯಾನದ ಭಾಗವಾಗಿ ಬಂಟ್ವಾಳ ತಾಲೂಕಿನ ಕುಕ್ಕಾಜೆ ಸರ್ಕಾರಿ ಶಾಲೆಗೂ ಕೂಡ ಎಸ್ಐಓ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಅವರು, ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಲಯ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ತಮ್ಮಿಂದಾದ ನೆರವು ನೀಡುವುದಾಗಿ ಎಸ್ಐಓ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಮುಬಾರಿಶ್ ಚೆಂಡಾಡಿ ಭರವಸೆ ನೀಡಿದ್ದರು.

ಆ ಬಳಿಕ ಕುಕ್ಕಾಜೆ ಸರ್ಕಾರಿ ಶಾಲೆಯ ಶೌಚಾಲಯ ಸಮಸ್ಯೆಯ ಬಗ್ಗೆ ಕೆಲವು ದಾನಿಗಳನ್ನು ಸಂಪರ್ಕಿಸಿದ ಎಸ್ಐಓ ಪದಾಧಿಕಾರಿಗಳು, ಆರ್ಥಿಕ ನೆರವು ನೀಡುವಂತೆ ಕೇಳಿಕೊಂಡಿದ್ದರು. ಎಸ್ಐಓ ಮನವಿಗೆ ಸ್ಪಂದಿಸಿದ ದಾನಿಯೋರ್ವರು 25 ಸಾವಿರ ನೀಡಿದರೆ, ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಪಾಣೆಮಂಗಳೂರು ಹಾಗೂ ಮಂಗಳೂರು ಘಟಕವು ಒಟ್ಟು 30 ಸಾವಿರ ರೂಪಾಯಿಗಳ ನೆರವನ್ನು ನೀಡಿತು. ಆ ಬಳಿಕ ಸ್ಥಳೀಯ ಗಾರೆ ಕೆಲಸಗಾರರನ್ನು ಸಂಪರ್ಕಿಸಿ, ಕೆಲವೇ ದಿನಗಳಲ್ಲಿ ಎರಡು ಸುಸಜ್ಜಿತವಾದ ಶೌಚಾಲಯವನ್ನು ಶಾಲೆಯ ಆವರಣದಲ್ಲೇ ಲಭ್ಯವಿದ್ದ ಜಾಗದಲ್ಲಿ ನಿರ್ಮಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಶೌಚಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಕ್ಕಾಜೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ, “ಶಾಲೆಯ ಹೆಣ್ಣು ಮಕ್ಕಳಿಗೆ ಆಗುತ್ತಿದ್ದ ಶೌಚಾಲಯ ಸಮಸ್ಯೆಯ ಬಗ್ಗೆ ಹಲವರಲ್ಲಿ ತಿಳಿಸಿದ್ದೆ. ಆದರೆ, ಯಾರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಸ್ಐಓ ಪದಾಧಿಕಾರಿಗಳಲ್ಲಿ ವಿನಂತಿಸಿ, ಕೆಲವೇ ದಿನಗಳಲ್ಲಿ ಎರಡು ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದು ನನ್ನ ಶಿಕ್ಷಕ ವೃತ್ತಿಯಲ್ಲಿನ ಹೊಸ ಅನುಭವ. ಶೌಚಾಲಯದ ಕಾಮಗಾರಿಯನ್ನು ಮುತುವರ್ಜಿ ವಹಿಸಿ, ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದು ವಿದ್ಯಾರ್ಥಿ ಸಂಘಟನೆಯೊಂದರ ಮಾದರಿ ಸೇವೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಬಣ್ಣಿಸಿದರು.

ಇದೇ ವೇಳೆ ಮಾತನಾಡಿದ ಕುಕ್ಕಾಜೆ ಪಂಚಾಯಿತಿಯ ಅಧ್ಯಕ್ಷರಾದ ಇಬ್ರಾಹಿಂ ಮಾತನಾಡಿ, “ನಮ್ಮ ಊರಿನಲ್ಲಿ ಸಮಾಜ ಸೇವಾ ಘಟಕದವರು ಉತ್ತಮ ಕಾರ್ಯಗಳನ್ನು ನಡೆಸಿಕೊಟ್ಟಿತ್ತು. ಅದರ ಮುಂದುವರಿದ ಭಾಗವಾಗಿ ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ಕುಕ್ಕಾಜೆ ಸರ್ಕಾರಿ ಶಾಲೆಯ ಹೆಣ್ಣುಮಕ್ಕಳಿಗಾಗಿ ನೂತನ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿರುವುದು ತುಂಬಾ ಸಂತಸದ ಸಂಗತಿ. ವಿದ್ಯಾರ್ಥಿ ಸಂಘಟನೆಗಳು ಇಂತಹ ಕೆಲಸದ ಮೂಲಕ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಬೋಳಂಗಡಿ ಮಾತನಾಡುತ್ತಾ, “ಎಸ್ಐಓ ಸಂಘಟನೆಯು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡುವುದರ ಜೊತೆಗೆ ಇಂತಹ ಸಮಾಜ ಸೇವಾ ಚಟುವಟಿಕೆಗಳನ್ನೂ ಕೂಡ ಮಾಡುತ್ತಿದೆ. ಇದು ಎಲ್ಲ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಸಿಫ್ ಡಿ ಕೆ ಮಾತನಾಡಿ, “ಎಸ್ಐಓ ಕೇವಲ ವಿದ್ಯಾರ್ಥಿ ಸಂಘಟನೆಯಲ್ಲ. ಅದೊಂದು ಚಳವಳಿ ರೀತಿಯಲ್ಲಿ ದೇಶದಲ್ಲಿ ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿರುವ ಎಸ್ಐಓ, ಕಳೆದ 43 ವರ್ಷಗಳಿಂದ ದೇಶದಲ್ಲಿ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಸದನದಲ್ಲಿ ಶಿಕ್ಷಣ, ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆ, ಶಿಕ್ಷಕರ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುತ್ತಾ ಬಂದಿದೆ. ಇದನ್ನು ಇನ್ನೂ ಕೂಡ ಮುಂದುರಿಸಲಿದೆ. ಎಸ್ಐಓ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು, ಕುಕ್ಕಾಜೆ ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳ ಸಮಸ್ಯೆಗೆ ಸ್ಪಂದಿಸಿ, ಕಡಿಮೆ ಅವಧಿಯಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿರುವುದು ಅನುಕರಣೀಯ ಸಂಗತಿ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ
“ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಕಳೆದ 43 ವರ್ಷ ಗಳಿಂದ ಶಿಕ್ಷಣಕ್ಕಾಗಿ ಹೋರಾಟ ಮತ್ತು ಅಭಿಯಾನಗಳ ಮೂಲಕ ಕೆಲಸವನ್ನು ಮಾಡಿದೆ. ಶೈಕ್ಷಣಿಕ ಅಭಿವೃದ್ಧಿ ಇದರ ಆದ್ಯತೆಯ ಕಾರ್ಯಕ್ಷೇತ್ರವಾಗಿದೆ. ಎಸ್ಐಓ ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತವಾದ ಶಿಕ್ಷಣ ಬೆಳೆಸುವುದು ಇದರ ಉದ್ದೇಶವಾಗಿದೆ” ಎಂದು ತಿಳಿಸಿದರು.
ಶಾಲೆಗೆ ಶೌಚಾಲಯ ನಿರ್ಮಿಸಿಕೊಟ್ಟದ್ದಕ್ಕಾಗಿ ಎಸ್ಐಓ ಪದಾಧಿಕಾರಿಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಕ್ಕಾಜೆ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಸಾದ್. ಕೆ, ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS)ಯ ಬಂಟ್ವಾಳ ತಾಲೂಕು ಕ್ಯಾಪ್ಟನ್ ಅಬ್ದುಲ್ ಸತ್ತಾರ್ ಗೂಡಿನಬಳಿ, M H ಅಬ್ದುಲ್ ಶುಕೂರ್ ಬೋಳಂಗಡಿ, ಶಂಶೀರ್ ಮೆಲ್ಕಾರ್, ಶರೀಫ್ ಮೆಲ್ಕಾರ್, ಎಸ್ಐಓ ಪಾಣೆಮಂಗಳೂರು ಘಟಕದ ಅಧ್ಯಕ್ಷ ಮುಬಾರಿಶ್ ಚೆಂಡಾಡಿ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ -ವಿದ್ಯಾರ್ಥಿನಿಯರು ಹಾಗೂ ಎಸ್ಐಓ ಪಾಣೆಮಂಗಳೂರು ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.
ದೇವಸ್ಯ ಪಡೂರಿನ ಸರ್ಕಾರಿ ಶಾಲೆಯ ಗ್ರಂಥಾಲಯಕ್ಕೆ ಕಪಾಟು ಕೊಡುಗೆ
ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ದೇವಸ್ಯ ಪಡೂರಿನ ಸರ್ಕಾರಿ ಶಾಲೆಯ ಗ್ರಂಥಾಲಯಕ್ಕೆ ಕಪಾಟನ್ನು ಕೊಡುಗೆಯಾಗಿ ಇತ್ತೀಚೆಗೆ ನೀಡಲಾಯಿತು.

2025ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ದೇವಸ್ಯ ಪಡೂರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾಂತಿ ಲೀಲಾ ಪಾಯಸ್ ರವರ ಕೋರಿಕೆಯಂತೆ ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.





