ಬಂಟ್ವಾಳ ತಾಲೂಕಿನ ಕೋಟೆಕಣಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದೀಕ್ ಕೋಟೆಕಣಿ ಅವರ ಮನವಿಗೆ ಸ್ಪಂದಿಸಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ, ಪಾಣೆಮಂಗಳೂರು ಘಟಕದಿಂದ ಶಾಲೆಗೆ 20 ಜೊತೆ ಬೆಂಚು ಡೆಸ್ಕುಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಲಾಗಿದೆ.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ಪಾಣೆಮಂಗಳೂರು ಘಟಕದ ಅಧ್ಯಕ್ಷ ಮುಬಾರಿಶ್ ಸಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, “ಕೋಟೆಕಣಿ ಶಾಲೆಯ ಮುಖ್ಯ ಶಿಕ್ಷಕಿ ವಿಮಲ ಅವರು ವಿದ್ಯಾರ್ಥಿಗಳು ವಿದ್ಯೆಯನ್ನು ಸಮಾನವಾಗಿ ಪಡೆಯುವಂತಾಗಬೇಕು. ಮೇಲು-ಕೀಳು ಮನೋಭಾವವಿಲ್ಲದೆ ವಿದ್ಯೆಯಲ್ಲಿ ಸ್ವಲ್ಪ ಹಿಂದಿರುವ ಮಕ್ಕಳಿಗೆ ಹೆಚ್ಚಿನ ಗಮನಕೊಟ್ಟು ಶಿಕ್ಷಣವನ್ನು ಪಡೆಯುವಂತೆ ನಮ್ಮ ಶಿಕ್ಷಕರು ಪ್ರಯತ್ನಿಸುತ್ತಾರೆ. ಅದರ ಜತೆಗೆ ನಮ್ಮೆಲ್ಲರ ಕರ್ತವ್ಯವೂ ಆಗಿದೆ” ಎಂದರು.
“ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು, ಶಿಕ್ಷಣವನ್ನು ಶಿಕ್ಷಕರು ಮತ್ತು ಹೆತ್ತವರು ನೀತಿಪಾಠಗಳೊಂದಿಗೆ ವಿವರಿಸಿಕೊಡಬೇಕು. ಎಲ್ಲರೂ ಸಮಾನರು ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಯುವಂತಾಗಬೇಕು, ಎಸ್ಐಒ ವಿದ್ಯಾರ್ಥಿ ಸಂಘಟನೆಯಾಗಿದ್ದು, ವಿದ್ಯಾರ್ಥಿಗಳ ಸೇವೆಗೆ ಸದಾ ಸಿದ್ಧ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ದೇಶವು ಉತ್ತಮವಾಗಿ ಅಭಿವೃದ್ಧಿಯೆಡೆಗೆ ಸಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವೈದ್ಯಕೀಯ ಕಾಲೇಜು ನಡೆಸಲಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ: ಡಾ ಮಧುಸೂದನ ಕಾರಿಗನೂರು ಪ್ರಶ್ನೆ
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದೀಕ್, ನೂತನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಬಸೀರ್, ಉಪಾಧ್ಯಕ್ಷ ಹುಸೇನ್ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು, ಶಾಲಾ ಶಿಕ್ಷಕ ವೃಂದ, ಎಸ್ಐಓ ಜಿಲ್ಲಾಧ್ಯಕ್ಷ ರಿಜ್ವಾನ್ ಹಾಗೂ ಎಸ್ಐಓ ಪಾಣೆಮಂಗಳೂರು ಘಟಕದ ಸದಸ್ಯರು ಇದ್ದರು.





