ʼಬ್ಯಾಡಗಿʼ ಮಾರುಕಟ್ಟೆಯಲ್ಲಿ ಕೆಂಪು ಕ್ರಾಂತಿ; ಅಂತೂ ರೈತರಿಗೆ ಸಿಹಿ ನೀಡಿದ ಮೆಣಸಿನಕಾಯಿ

Date:

ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ವರ್ಷ ದಾಖಲೆ ಮಟ್ಟದ ದರಗಳು ಓಡಾಡಿವೆ. ಕಡಿಮೆ ಇಳುವರಿ, ಹೆಚ್ಚು ಬೇಡಿಕೆ ರೈತರಿಗೆ ಲಾಭ ತಂದಿದೆ. ಇ-ಟೆಂಡರ್ ವ್ಯವಸ್ಥೆ ಹಾಗೂ ಖರೀದಿದಾರರ ಸ್ಪರ್ಧೆಯಿಂದ ಕಡ್ಡಿ ಮತ್ತು ಡಬ್ಬಿ ತಳಿಗೆ ಉತ್ತಮ ಬೆಲೆ ಲಭಿಸಿದೆ. ಕಳೆದ ವರ್ಷದ ನಷ್ಟದ ನಂತರ ಈ ವರ್ಷದ ದರ ಏರಿಕೆ ರೈತರಿರಲ್ಲಿ ಹೊಸ ಭರವಸೆ ತುಂಬಿದೆ.

ಹಾವೇರಿ ಜಿಲ್ಲೆಯ ಪುಟ್ಟ ಪಟ್ಟಣ ʼಬ್ಯಾಡಗಿʼ, ಕೆಂಪು ಮೆಣಸಿನಕಾಯಿಗೆ ಜಾಗತಿಕ ಗುರುತು ಕೊಟ್ಟ ವ್ಯಾಪಾರ ಕೇಂದ್ರ. ಗಾಢ ಕೆಂಪು ಬಣ್ಣ, ಮೃದುವಾದ ಖಾರ ಮತ್ತು ಗುಣಮಟ್ಟದ ಕಾರಣದಿಂದ ಈ ಬ್ಯಾಡಗಿಯ ಕೆಂಪು ಚೆಲುವೆ ಭಾರತವೂ ಸೇರಿದಂತೆ ದೇಶ-ವಿದೇಶಗಳ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾಳೆ. ಸದ್ಯ ಈ ಬ್ಯಾಡಗಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಒಣ ಮೆಣಸಿನಕಾಯಿಗೆ ದಾಖಲೆ ಮಟ್ಟದ ದರ ದೊರಕಿರುವುದು ರೈತ ವಲಯದಲ್ಲಿ ಭಾರೀ ಸಂತಸ ಹಾಗೂ ಚರ್ಚೆಗೆ ಕಾರಣವಾಗಿದೆ.

ಕಳೆದ ವಾರ ಕ್ವಿಂಟಲ್‌ಗೆ ಸುಮಾರು ₹90,000 ತಲುಪಿದ್ದ ಬ್ಯಾಡಗಿ ಮೆಣಸಿನಕಾಯಿಯ ಬೆಲೆ, ಈ ವಾರ ₹74,000ಕ್ಕೆ ಇಳಿದರೂ ಸಹ ಉತ್ತರ ಕರ್ನಾಟಕದ ರೈತರಿಗೆ ಇದು ಲಾಭದಾಯಕ ವಹಿವಾಟೇ ಆಗಿದೆ. ಆದರೆ ಇದೇ ಬೆಲೆ ಬದಲಾವಣೆ ಬಳ್ಳಾರಿ ಹಾಗೂ ಆಂಧ್ರ-ತೆಲಂಗಾಣ ಭಾಗದ ರೈತರನ ಅತೃಪ್ತಿಗೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2026 02 21 at 1.46.14 PM 1

ಬ್ಯಾಡಗಿಯನ್ನು ಸಾಮಾನ್ಯವಾಗಿ ಮೆಣಸಿನಕಾಯಿ ನಾಡು ಎಂದು ಕರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಬ್ಯಾಡಗಿ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರಮಾಣ ಕಡಿಮೆ. ಆದರೂ ಸಹ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಇತರ ರಾಜ್ಯಗಳಿಂದಲೂ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಬ್ಯಾಡಗಿ ದೇಶದ ಪ್ರಮುಖ ಮೆಣಸಿನಕಾಯಿ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಸೋಮವಾರ ಮತ್ತು ಗುರುವಾರ ವ್ಯಾಪಾರ ಚಟುವಟಿಕೆಗಳು ಜೋರಾಗಿರುತ್ತವೆ.

ಬ್ಯಾಡಗಿ ಮಾರುಕಟ್ಟೆಗೆ ಮುಖ್ಯವಾಗಿ ಡಬ್ಬಿ (ದಪ್ಪ ಮತ್ತು ಗಿಡ್ಡ) ಹಾಗೂ ಕಡ್ಡಿ (ಉದ್ದ ಮತ್ತು ಸುಕ್ಕಾದ) ತಳಿಯ ಮೆಣಸಿನಕಾಯಿಗಳು ಆವಕವಾಗುತ್ತವೆ. ಈ ಎರಡು ತಳಿಯ ಮೆಣಸಿನಕಾಯಿಗಳು ತಮ್ಮ ವಿಶಿಷ್ಟವಾದ ಗಾಢ ಕೆಂಪು ಬಣ್ಣ ಮತ್ತು ಕಡಿಮೆ ಖಾರ ಗುಣಲಕ್ಷಣಗಳಿಗಾಗಿ ಪ್ರಸಿದ್ಧಿ ಪಡೆದಿವೆ. ಇದೇ ಕಾರಣದಿಂದಾಗಿ ಬ್ಯಾಡಗಿಯ ಕಡ್ಡಿ ಹಾಗೂ ಡಬ್ಬಿ ಮೆಣಸಿನಕಾಯಿಗಳಿಗೆ ಆಹಾರೋದ್ಯಮದಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ನೈಸರ್ಗಿಕ ಬಣ್ಣಕಾರಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಡ್ಡಿ ಹಾಗೂ ಡಬ್ಬಿ ತಳಿ ಮೆಣಸಿಕಾಯಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಜೊತೆಗೆ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಬೆಳೆಯುತ್ತಾರೆ. ಇನ್ನು ಬಳ್ಳಾರಿ ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣಗಳಿಂದ ವಿವಿಧ ತಳಿಯ ಮೆಣಸಿನಕಾಯಿ ಆವಕವಾಗುತ್ತವೆ.

ಕಳೆದ ವಾರ ದಾಖಲೆ ಬೆಲೆಗೆ ಮಾರಾಟ: ಕಳೆದ ಸೋಮವಾರ ಬ್ಯಾಡಗಿ ಮಾರುಕಟ್ಟೆಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಪ್ರಕಾಶ ಸಜ್ಜನರ ಅವರ ಡಬ್ಬಿ ಒಣ ಮೆಣಸಿನಕಾಯಿ ರೂ.89,999ಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ.

ಈ ವಾರ (ಫೆ.20) ಮಾರುಕಟ್ಟೆಗೆ ಬಂದ ಒಟ್ಟು ಚೀಲಗಳು 1,61,586, ದಲ್ಲಾಳಿಗಳ ಸಂಖ್ಯೆ 308, ನೋ ಬಿಡ್ ಲಾಟ್ ಸಂಖ್ಯೆ 425, ಒಟ್ಟು ಲಾಟ್ ಸಂಖ್ಯೆ 19,304, ಖರೀದಿದಾರರ ಸಂಖ್ಯೆ 373, ಒಟ್ಟು ಖರೀದಿದಾರರ ಬಿಡ್ ಗಳ ಸಂಖ್ಯೆ 1,55,595

ಒಣ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಿವಿಧ ತಳಿಗಳ ದರದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಕಡ್ಡಿ ಮೆಣಸಿನಕಾಯಿ ಕನಿಷ್ಠ ₹4,569 ದರದಿಂದ ಆರಂಭವಾಗಿ ಗರಿಷ್ಠ ₹69,099 ವರೆಗೆ ಮಾರಾಟವಾಗಿದ್ದು, ಸರಾಸರಿ ದರ ₹48,009 ಆಗಿದೆ. ಡಬ್ಬಿ ಮೆಣಸಿನಕಾಯಿಯು ₹5,689 ಕನಿಷ್ಠ ದರಕ್ಕೆ ವಹಿವಾಟು ಆರಂಭಿಸಿ, ₹77,786 ಗರಿಷ್ಠ ದರವನ್ನು ತಲುಪಿದ್ದು, ಇದರ ಸರಾಸರಿ ದರ ₹51,259 ಆಗಿದೆ. ಇನ್ನು ಗುಂಟೂರು ತಳಿ ಮೆಣಸಿನಕಾಯಿಯು ಕಡಿಮೆ ದರದಲ್ಲಿ ವಹಿವಾಟಾಗಿದ್ದು, ಕನಿಷ್ಠ ₹1,809 ರಿಂದ ಗರಿಷ್ಠ ₹18,859 ವರೆಗೆ ಮಾರಾಟವಾಗಿದೆ. ಸರಾಸರಿ ದರ ₹14,509 ದಾಖಲಾಗಿದೆ.

“ಬ್ಯಾಡಗಿ‌ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕಿಂತ ಈ ವಾರದಲ್ಲಿ ಡಬ್ಬಿ ಹಾಗೂ ಕಡ್ಡಿ ಒಣ ಮೆಣಸಿನಕಾಯಿಗೆ ಎಂಟರಿಂದ ಹತ್ತು ಸಾವಿರ ದರ ಕಡಿಮೆಯಾಗಿದ್ದರೂ ಉತ್ತರ ಕರ್ನಾಟಕದ ಕೆಲ ಭಾಗಗಳ ರೈತರು ತೃಪ್ತರಾಗಿದ್ದರೆ, ವಿಶೇಷವಾಗಿ ಬಳ್ಳಾರಿ, ಆಂಧ್ರ, ತೆಲಂಗಾಣ ರೈತರು ಬೆಳೆದ ಒಣ ಮೆಣಸಿನಕಾಯಿಗೆ ಆರೇಳು ಸಾವಿರ ಕಡಿಮೆ ಆಗಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಿಯ ಮಾರುಕಟ್ಟೆಗೂ ಬ್ಯಾಡಗಿ ಮಾರುಕಟ್ಟೆಗೂ ಏನು ವ್ಯತ್ಯಾಸ?: ಸ್ಥಳೀಯ ಮಾರುಕಟ್ಟೆಗೂ ಬ್ಯಾಡಗಿ ಮಾರುಕಟ್ಟೆಗೂ ದರ ವ್ಯತ್ಯಾಸಗಳು ಸ್ಪಷ್ಟವಾಗಿ ಕಂಡು ಬರುತ್ತವೆ. ಇ-ಟೆಂಡರ್ ಮೂಲಕ ಹೆಚ್ಚು ವಹಿವಾಟು ನಡೆಯುತ್ತದೆ. ಖರೀದಿದಾರರು ಇ-ಟೆಂಡರ್ ಮೂಲಕ ಖರೀದಿ ಮಾಡುವುದರಿಂದ ರೈತರ ಒಣ ಮೆಣಸಿಕಾಯಿಗೆ ಸ್ಪರ್ಧಾತ್ಮಕ ದರ ಸಿಗುವ ಸಾಧ್ಯತೆಗಳಿವೆ. ಸ್ಥಳೀಯ ಒಣ ಮೆಣಸಿನಕಾಯಿ ಮಾರುಕಟ್ಟೆಗಳಾದ ಹುಬ್ಬಳ್ಳಿ, ಗದಗ, ಹೊಸಪೇಟೆಗಳಲ್ಲಿ ದಲ್ಲಾಳಿಗರು ಹಾಗೂ ಖರೀದಿದಾರ ಸಂಖ್ಯೆ ಕಡಿಮೆ. ಆಗ ನೇರವಾಗಿ ಖರೀದಿದಾರರು ನಿಗದಿತ ಬೆಲೆ ಕೊಟ್ಟು ಮೆಣಸಿನಕಾಯಿ ಕೊಳ್ಳಬೇಕಾಗತ್ತದೆ. ಆದರೆ ಬ್ಯಾಡಗಿ ಮಾರುಕಟ್ಟೆಯಲ್ಲಿ ದಲ್ಲಾಳಿಗರು ಹಾಗೂ ಖರೀದಿದಾರರು ಹೆಚ್ಚು ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ. ಬೇರೆ ಬೇರೆ ರಾಜ್ಯಗಳಿಂದ ರೈತರು ಒಣ ಮೆಣಸಿನಕಾಯಿಯನ್ನು ಬ್ಯಾಡಗಿ ಮಾರುಕಟ್ಟೆಗೆ ತರಲು ಇದೇ ಮುಖ್ಯ ಕಾರಣ” ಎನ್ನುತ್ಥಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಾ. ಆದರ್ಶ ಡಿ ಬಿ.

ದರ ಹೆಚ್ಚಾಗಲು ಇದೇ ಕಾರಣ:
ಕಳೆದ 2025ರಲ್ಲಿ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದ ಪರಿಣಾಮ ಇಳುವರಿಯೂ ಗಣನೀಯವಾಗಿ ಹೆಚ್ಚಿತ್ತು. ಇದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಆವಕವಾಗಿದ್ದು, ಬೇಡಿಕೆಗೆ ಹೋಲಿಸಿದರೆ ಪೂರೈಕೆ ಜಾಸ್ತಿಯಾಗಿತ್ತು. ಪರಿಣಾಮವಾಗಿ ಒಣ ಮೆಣಸಿನಕಾಯಿ ದರ ಕುಸಿತ ಕಂಡು, ಕ್ವಿಂಟಾಲ್‌ಗೆ ಸರಾಸರಿ ₹30,000 ರಿಂದ ₹35,000 ದರದಲ್ಲಿ ವಹಿವಾಟು ನಡೆದಿತ್ತು.

ಆದರೆ ಪ್ರಸ್ತುತ ವರ್ಷದಲ್ಲಿ ಮೆಣಸಿನಕಾಯಿ ಬಿತ್ತನೆ ಪ್ರದೇಶ ಕಡಿಮೆಯಾದ ಕಾರಣ ಇಳುವರಿ ಸಹ ಕುಸಿತ ಕಂಡಿದೆ. ಇದರಿಂದ ಮಾರುಕಟ್ಟೆಗೆ ಒಣ ಮೆಣಸಿನಕಾಯಿ ಆವಕ ತೀವ್ರವಾಗಿ ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ಬೇಡಿಕೆ ಹೆಚ್ಚಾಗಿದೆ. ಪೂರೈಕೆ-ಬೇಡಿಕೆ ಅಸಮತೋಲನದ ಹಿನ್ನೆಲೆಯಲ್ಲಿ ಒಣ ಮೆಣಸಿನಕಾಯಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ರೈತರಿಗೆ ಲಾಭದಾಯಕ ವಹಿವಾಟು ಸಾಧ್ಯವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕಡಿಮೆ ಇಳುವರಿಗೆ ಕಾರಣ?:
ಈ ವರ್ಷ ಮೆಣಸಿನಕಾಯಿ ಇಳುವರಿ ಕಡಿಮೆಯಾಗಲು ಹಲವು ಕಾರಣಗಳಿವೆ. ರೈತರ ಪ್ರಕಾರ, ಮೆಣಸಿನಕಾಯಿ ಬಿತ್ತನೆ ಪ್ರದೇಶವೇ ಕಡಿಮೆಯಾಗಿರುವುದು ಒಟ್ಟು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ಬೆಳೆ ಹಂತದಲ್ಲೇ ರೋಗಭಾದೆ ವ್ಯಾಪಕವಾಗಿ ಕಂಡುಬಂದಿದ್ದು, ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ಅಲ್ಲದೆ, ಕೊಯ್ಲು ಹಾಗೂ ಒಣಗಿಸುವ ಹಂತದಲ್ಲಿ ಸಂಭವಿಸಿದ ಅಕಾಲಿಕ ಮಳೆ ಒಣ ಮೆಣಸಿನಕಾಯಿ ಹಾನಿಗೆ ಕಾರಣವಾಗಿ, ಮಾರುಕಟ್ಟೆಗೆ ಗುಣಮಟ್ಟದ ಉತ್ಪನ್ನದ ಆವಕವನ್ನು ಮತ್ತಷ್ಟು ಕಡಿಮೆ ಮಾಡಿದೆ. ಈ ಎಲ್ಲ ಅಂಶಗಳ ಒಟ್ಟಾರೆ ಪರಿಣಾಮವಾಗಿ ಈ ವರ್ಷ ಮೆಣಸಿನಕಾಯಿ ಇಳುವರಿ ನಿರೀಕ್ಷೆಗಿಂತ ಕಡಿಮೆಯಾಗಿದೆ ಎನ್ನುತ್ತಾರೆ.

ಬ್ಯಾಡಗಿ ಮಾರುಕಟ್ಟೆಗೆ ಒಣ ಮೆಣಸಿಕಾಯಿ ತಂದಿದ್ದ ರೈತ ಈಶ್ವರಗೌಡ ಪಾಟೀಲ್ ಮಾತನಾಡಿ, “ಈ ವರ್ಷ ಮೆಣಸಿನಕಾಯಿ ಫಸಲು ಬರದೆ ಹೋಗಿದ್ದರೂ, ಉತ್ತಮ ಬೆಲೆ ಬಂದಿದ್ದರಿಂದ ತೃಪ್ತಿಯಿದೆ. ರೈತರಿಗೆ ಖರ್ಚು ಜಾಸ್ತಿ ಆಗಿದೆ. ಇದೆ ರೇಟು ಮುಂದುವರಿದರೆ ರೈತರಿಗೆ ಒಳ್ಳೆಯದಾಗುತ್ತೆ‌. ಹೋದ ವರ್ಷ ಎಕರೆಗೆ ಐದರಿಂದ ಆರು ಕ್ವಿಂಟಾಲ್ ಬರುತ್ತಿತ್ತು. ಈ ವರ್ಷ ಎರಡರಿಂದ ಮೂರು ಕ್ವಿಂಟಾಲ್ ಬಂದಿದೆ. ಹೋದ ವರ್ಷಕ್ಕಿಂತ ಈ ವರ್ಷ ಬೆಲೆ ಜಾಸ್ತಿಯಾಗಿದೆ. ಒಮ್ಮೆ ಆಕಾಶಕ್ಕೆ ಕರ್ಕೊಂಡು ಹೋಗೋದು, ಇನ್ನೊಮ್ಮೆ ದಪ್ಪಂತ ನೆಲಕ್ಕೆ ಬಿಳಿಸೋದು ಮಾಡದೆ, ರೈತರಿಗೆ ಮಿನಿಮಮ್ 40ಸಾವಿರದಿಂದ 45ಸಾವಿರ ಸಿಕ್ಕರ ತೃಪ್ತಿ ಆಗುತ್ತದೆ” ಎಂದು ಹೇಳಿದರು.

WhatsApp Image 2026 02 21 at 1.46.13 PM

ಇದನ್ನೂ ಓದಿ: ಗೆಲುವಿನ ಘಾಟು ಎಬ್ಬಿಸಿದ ʼಕೆಂಪು ಬೆಡಗಿʼ: ದಾಖಲೆಯ ಧಾರಣೆ ಕಂಡ ಬ್ಯಾಡಗಿ ಮೆಣಸಿನಕಾಯಿ

ಕಳೆದ ವರ್ಷ ಒಣ ಮೆಣಸಿಕಾಯಿ ಇಳುವರಿ ಇದ್ದರೂ ಸೂಕ್ತ ದರ ಬರದೆ ಇದ್ದುದರಿಂದ ಉತ್ತರ ಕರ್ನಾಟಕದ ರೈತರು ತಮ್ಮ ಮನೆಯಲ್ಲಿಯೇ ಕ್ವಿಂಟಾಲ್ ಗಟ್ಟೆಲೆ ಮೆಣಸಿನಕಾಯಿ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಈ ವರ್ಷ ಉತ್ತಮ ಬೆಲೆ ಬಂದಿದ್ದರಿಂದ ಹೋದ ವರ್ಷ ಸಂಗ್ರಹಿಸಿಟ್ಟಿದ್ದ ಒಣ ಮೆಣಸಿಕಾಯಿಯನ್ನು ಉತ್ತಮ ದರಕ್ಕೆ ಮಾರಾಟ ಮಾಡಿದ್ದಾರೆ. ಈ ವರ್ಷದ ಒಣ ಮೆಣಸಿನಕಾಯಿ ಇಳುವರಿ ಕಡಿಮೆ ಇದ್ದರೂ ಉತ್ತಮ ಬೆಲೆಗೆ ಮಾರಾಟ ಆಗುತ್ತಿರುವುದರಿಂದ ರೈತರಲ್ಲಿ ಸಂತಸ ತಂದಿದೆ. ಈ ಒಣ ಮೆಣಸಿಕಾಯಿಯ ಮಾದರಿ ದರ ಮಾರುಕಟ್ಟೆ ಬೆಲೆ ಕಾಯ್ದುಕೊಂಡರೆ ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಂತಾಗುತ್ತದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...