ಪೋಲಿಸರಿಂದ ಅಧಿಕಾರಲೋಪವಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಶ್ರೀನಿವಾಸಗೌಡ ಪಾಟಿಲ್ ಆಗ್ರಹಿಸಿದ್ದಾರೆ.
ಬೆಳಗಾವಿಯ ಉತ್ತರ ವಲಯ ಪೋಲಿಸ್ ಮಹಾನಿರೀಕ್ಷಕರು, ಗೃಹ ಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ್ದಾರೆ.
“ಗ್ರಾಮ ಪಂಚಾಯಿತಿ ಭ್ರಷ್ಟಾಚಾರ ಖಂಡಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮ ಪಂಚಾಯಿತಿ ಎದುರು 2017ರ ಮಾರ್ಚ್ 6ರಂದು ನಡೆಸಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ನನ್ನ ಮತ್ತು ಸಾರ್ವಜನಿಕರ ವಿರುದ್ಧ ಪೊಲೀಸ್ ಇಲಾಖೆಯು ದೂರು ದಾಖಲಿಸಿ, ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ದೋಷಾರೋಪಣ ಪತ್ರ ತಾಯಾರಿಸಿ ನಮ್ಮನ್ನು 7 ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸುವಂತೆ ಮಾಡಿದ್ದರು” ಎಂದು ಆರೋಪಿಸಿದರು.
“ನ್ಯಾಯಾಲಯವು ಈ ಪ್ರಕರಣದಲ್ಲಿ ನಮ್ಮನ್ನು ಆರೋಪಮುಕ್ತಗೊಳಿಸಿದೆ. ಆದ್ದರಿಂದ ದೂರುದಾರರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕಲಂ 166, 182, 211, 219, 220, 469, 471 ಮತ್ತು ಕಂಡುಬರುವ ಇತರೆ ಕಲಂಗಳ ಪ್ರಕಾರ ಮೊಕದ್ದಮೆ ದಾಖಲಿಸಬೇಕು. ಅಧಿಕಾರಿಗಳು ಗಂಭೀರ ಕರ್ತವ್ಯಲೋಪವೆಸಗಿದ್ದು ಮತ್ತು ಅಧಿಕಾರಿಗಳಿಗೆ ಸುಳ್ಳು ವರದಿ ನೀಡಿದ್ದಾರೆ. ಹಾಗಾಗಿ 15 ದಿನದೊಳಗಾಗಿ ತನಿಖೆ ನಡೆಸಿ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತರಿಗೆ ಬಹಿಷ್ಕಾರ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟಿಲ್, “ಅನಾವಶ್ಯಕವಾಗಿ 7 ವರ್ಷಗಳ ಕಾಲ ಕೋರ್ಟಿಗೆ ಅಲೆದಾಡಿಸಿ ಮಾನಸಿಕವಾಗಿ ಕಿರುಕುಳ ನೀಡಿದ ಅಧಿಕಾರಿಗಳನ್ನು ವಜಾಗೊಳಿಸಬೇಕು. ಹಾಗೂ 15 ದಿನಗಳೊಳಗೆ ಸೂಕ್ತ ಆದೇಶವನ್ನು ಮಾಡಬೇಕೆಂದು ಪೋಲಿಸ್ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.





