ಮಹಾರಾಷ್ಟ್ರದ ರೈತರು ಬೆಳೆಯುವ ಈರುಳ್ಳಿ ಪ್ರಮಾಣ ಮೇಲೇ ಪ್ರತಿವರ್ಷ ಬೆಳಗಾವಿ ಮತ್ತು ಹುಬ್ಬಳ್ಳಿ ಮಾರುಕಟ್ಟೆಯ ಈರುಳ್ಳಿ ಬೆಲೆ ನಿರ್ಧಾರವಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಈ ವರ್ಷ ನೆರೆ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಹಾಗಾಗಿ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಈರುಳ್ಳಿ ಬೆಳೆಗಾರರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಈರುಳ್ಳಿ ಬೆಳೆ ಉತ್ತಮವಾಗಿದ್ದು, ರೈತರು ಉತ್ತಮ ದರದ ನಿರೀಕ್ಷೆಯನ್ನೂ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ರೈತ ಬಸಪ್ಪ ಪೂಜೇರ ಈ ದಿನ.ಕಾಮ್ ಜೊತೆ ಮಾತನಾಡಿ, “ಈ ವರ್ಷ ಮಹಾರಾಷ್ಟ್ರದಿಂದ, ಬೆಳಗಾವಿ ಮತ್ತು ಹುಬ್ಬಳ್ಳಿ ಮಾರುಕಟ್ಟೆಗೆ ಈರುಳ್ಳಿ ಬಂದಿಲ್ಲ. ಇದರಿಂದ ನಾವು ಬೆಳೆದಿರುವ ಈರುಳ್ಳಿಗೆ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಮಾರುಕಟ್ಟೆಯಲ್ಲಿ ಈಗ ಪ್ರತಿ ಕ್ವಿಂಟಲ್ ಈರುಳ್ಳಿಗೆ ₹4,200ರಿಂದ ₹4,600ರವರೆಗೆ ಬೆಲೆಯಿದ್ದು, ಇನ್ನೂ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆಯಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ನಂದಿಹಾಳ ಗ್ರಾಮದ ರೈತ ಸುರೇಶ್ ಭಂಗಿ ಮಾತನಾಡಿ, “ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ₹30,000 ವೆಚ್ಚವಾಗುತ್ತದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಒಳ್ಳೆಯ ಬೆಲೆ ಇರುವುದರಿಂದ ಈರುಳ್ಳಿ ಬೆಳೆಗಾರರಿಗೆ ಲಾಭವಾಗುವ ನಿರೀಕ್ಷೆಯಿದೆ. ಆದರೆ ಕೇಂದ್ರ ಸರ್ಕಾರವು ಬೇರೆ ಕಡೆಯಿಂದ ಈರುಳ್ಳಿ ಆಮದು ಮಾಡಿಕೊಂಡರೆ ಈರುಳ್ಳಿ ಬೆಲೆ ಕುಸಿಯುವ ಸಾಧ್ಯತೆಯಿತೆ. ಆದ್ದರಿಂದ ಆಮದು ಮಾಡಿಕೊಳ್ಳದೇ ಇರುವುದು ಉತ್ತಮ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಸೀತಾರಾಮ್ ಯೆಚೂರಿ ನಿಧನ; ಎಸ್‌ಎಫ್‌ಐನಿಂದ ಸಂತಾಪ
ಕೆಂದ್ರ ಸರ್ಕಾರವು ಗ್ರಾಹಕರ ಅನುಕೂಲಕ್ಕಾಗಿ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಮಳಿಗೆಗಳಿಂದ ಗ್ರಾಹಕರಿಗೆ ಪ್ರತಿ ಕೆಜಿಗೆ ₹35ರ ದರದಲ್ಲಿ ಮಾರಾಟ ಮಾಡಲು ಮುಂದಾಗಿರುವುದು ಈರುಳ್ಳಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹಿಂದಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ಆಮದು ಮಾಡಿಕೊಂಡಿದ್ದರಿಂದ ಈರುಳ್ಳಿ ಬೆಲೆ ಕುಸಿದಿತ್ತು. ಆದ್ದರಿಂದ ಕೇಂದ್ರ ಸರ್ಕಾರವು ಗ್ರಾಹಕರು ಮತ್ತು ಈರುಳ್ಳಿ ಬೆಳೆಗಾರರ ಹಿತ ಕಾಪಾಡುವಂತಹ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಾಳಪ್ಪ ಪಾಟೀಲ ಕೋರಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




