ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಪಂಚಾಯತಿ ಹಾಗೂ ಮುದೆನೂರ ಮತ್ತು ಓಬಳಾಪೂರ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರಗಳು ಸಾಬೀತಾಗಿವೆ. ಅವ್ಯವಹಾರದಿಂದ ಸರ್ಕಾರಕ್ಕೆ ನಷ್ಟವಾಗಿದ್ದು, ಆ ಹಣವನ್ನು ತಪ್ಪಿತಸ್ಥತರಿಂದ ವಸೂಲಿಸದೇ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೇ ಭ್ರಷ್ಟರನ್ನು ರಕ್ಷಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಆರೋಪಿಸಿದ್ದಾರೆ. ಆಡಳಿತದ ಧೋರಣೆಯನ್ನು ಖಂಡಿಸಿ, ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕು ಪಂಚಾಯತಿ ಎದುರು ಜುಲೈ 1ರಿಂದ ಆಹೋರಾತ್ರಿ ಧರಣಿ ನಡೆಸುವುದಾಗಿ ಶ್ರೀನಿವಾಸಗೌಡ ಹೇಳಿದ್ದಾರೆ.
ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಅಕ್ರಮಗಳ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀನಿವಾಸಗೌಡ, “ಪಂಚಾಯತಿಗಳಲ್ಲಿ ಮನರೇಗಾ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಮೂರು ಪಂಚಾಯತಿಗಳಿಂದ ಬರೋಬ್ಬರಿ 54,18,181 ರೂ. ಅವ್ಯವಹಾರ ನಡೆದಿದೆ. ಆದರೂ, ಇಲಾಖಾ ತನಿಖೆಯಲ್ಲಿ ಸಾಬೀತಾದ 24,76,614 ರೂ.ಗಳನ್ನು ತಪ್ಪಿತಸ್ಥರಿಂದ ವಸೂಲಿ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
“6೦ ಲಕ್ಷ ರೂ.ಗೂ ಅಧಿಕ ಅವ್ಯವಹಾರ ನಡೆಸಿರುವ ಓಬಳಾಪೂರ ಗ್ರಾಮ ಪಂಚಾಯತಿ ಪಿಡಿಓರನ್ನು ಅಮಾನತ್ತುಗೊಳಿಸಿ 2 ವರ್ಷ ಕಳೆದಿವೆ. ಅದರೂ, ನಿಯಮಾನುಸಾರ 9 ತಿಂಗಳಲ್ಲಿ ಶಿಕ್ಷೆ ವಿಧಿಸಬೇಕು. ಆದರೆ, ಇಲ್ಲಿಯವರೆಗೆ ಸೇವೆಯಿಂದ ವಜಾಗೊಳಿಸಲಾಗಿಲ್ಲ” ಎಂದು ದೂರಿದ್ದಾರೆ.
“ರಾಮದುರ್ಗ ತಾಲೂಕಿನ 37 ಗ್ರಾಮ ಪಂಚಾಯತಿಯ ಲೆಕ್ಕಪರಿಶೋಧನಾ ವರದಿಯನ್ನು ಪರಿಗಣಿಸಿ 6 ತಿಂಗಳೊಳಗೆ ಕ್ರಮವಹಿಸಬೇಕೆಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅದರಂತೆ, ತಪ್ಪಿತಸ್ಥರಿಂದ 28 ಕೋಟಿ ರೂ.ಗಳನ್ನು ಬಡ್ಡಿ ಸಮೇತ ವಸೂಲಾತಿ ಮಾಡಬೇಕಿತ್ತು. ಅದರೆ, ಅದೂ ಆಗಿಲ್ಲ. ರಾಮದುರ್ಗ ತಾಲೂಕು ಪಂಚಾಯತಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ, ಆರೋಪಿಗಳ ಜೊತೆಗೆ ಶಾಮಿಲಾಗಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಎಲ್ಲ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಹೋರಾತ್ರಿ ಹೋರಾಟ ನಡೆಸುತ್ತೇನೆ” ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.




