ಬೆಳಗಾವಿ ಜಿಲ್ಲೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಚುನಾವಣೆಯು ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಪಕ್ಷ ಪ್ರತಿಷ್ಠೆಗಿಂತ ವ್ಯಕ್ತಿ ಪ್ರತಿಷ್ಠೆ, ಕುಟುಂಬದ ಪ್ರತಿಷ್ಠೆ ಮತ್ತು ಸ್ಥಳೀಯ ಸ್ವಾಭಿಮಾನದ ಪೈಪೋಟಿ ಈ ಚುನಾವಣೆಯ ವೈಶಿಷ್ಟ್ಯವಾಗಿದ್ದು, ಜಾರಕಿಹೊಳಿ ಬಣ ಹಾಗೂ ರಮೇಶ ಕತ್ತಿ ಬಣಗಳ ನಡುವಿನ ರಾಜಕೀಯ ಯುದ್ದಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾಮದುರ್ಗ ತಾಲೂಕಿನ ನಿರ್ದೇಶಕ ಸ್ಥಾನಕ್ಕಾಗಿ ನಡೆಯುತ್ತಿರುವ ತ್ರಿಕೋನ ಪೈಪೋಟಿ ಜನಮನ ಸೆಳೆದಿದೆ.
ಅಕ್ಟೋಬರ್ 19ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಒಟ್ಟು 16 ಸ್ಥಾನಗಳಿಗೆ ಮತದಾನ ನಿಗದಿಯಾಗಿದ್ದರೂ, ಚುನಾವಣೆಗೆ ಮುಂಚೆ 6 ಸ್ಥಾನಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಯರಗಟ್ಟಿಯಿಂದ ವಿಶ್ವಾಸ್ ವೈದ್ಯ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಗೋಕಾಕದಿಂದ ಅಮರನಾಥ ಜಾರಕಿಹೊಳಿ ಹಾಗೂ ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ ಸೇರಿದಂತೆ ಆರು ಮಂದಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯ ಕುರಿತು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಅಕ್ಟೋಬರ್ 13ರಂದು ಘೋಷಣೆಯಾಗುವ ನಿರೀಕ್ಷೆಯಿದೆ.
ರಾಮದುರ್ಗದಲ್ಲಿ ತ್ರಿಕೋನ ಪೈಪೋಟಿ
ರಾಮದುರ್ಗದಿಂದ ಶಾಸಕ ಅಶೋಕ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಹಾಗೂ ಬಾಲಚಂದ್ರ ಜಾರಕಿಹೊಳಿ ಬಣದ ಶ್ರೀಕಾಂತ ಢವನ್ ಹಾಗೂ ಮಾರುತಿ ತುಪ್ಪದ ಎನ್ನುವವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಮೂವರ ನಡುವೆ ನಡೆದಿರುವ ಪೈಪೋಟಿ ಸ್ಥಳೀಯ ಸ್ವಾಭಿಮಾನ ಮತ್ತು ವ್ಯಕ್ತಿ ಪ್ರತಿಷ್ಠೆ ನಡುವಿನ ಸ್ಪರ್ಧೆಯಾಗಿದೆ.
ಅಶೋಕ ಪಟ್ಟಣ, ʼನಾನು ಯಾವುದೇ ಬಣದ ಪರ ಸ್ಪರ್ಧಿಸುತ್ತಿಲ್ಲ; ನನ್ನದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ಯಾನೆಲ್ʼ ಎಂದು ಘೋಷಿಸಿರುವುದು ರಾಜಕೀಯವಾಗಿ ಗಮನಸೆಳೆದಿದೆ. ಮತ್ತೊಂದೆಡೆ, ಮಲ್ಲಣ್ಣ ಯಾದವಾಡ ಅವರಿಗೆ ಅವರ ಅಣ್ಣ ಮಹಾದೇವಪ್ಪ ಯಾದವಾಡರ ಬೆಂಬಲ ದೊರಕಿದ್ದು, ಹಿಂದಿನ ಚುನಾವಣೆಯಲ್ಲಿ ಶ್ರೀಕಾಂತ ಢವನ್ ಅವರ ಗೆಲುವಿಗೆ ಮಹಾದೇವಪ್ಪ ಯಾದವಾಡ ಕಾರಣರಾಗಿದ್ದರು ಎಂಬುದು ಇಂದಿನ ಸ್ಪರ್ಧೆಗೆ ಹೊಸ ತಿರುವು ನೀಡಿದೆ.
ಶ್ರೀಕಾಂತ ಢವನ್ ಅವರಿಗೆ ಬಾಲಚಂದ್ರ ಜಾರಕಿಹೊಳಿ ಬಣದ ವ್ಯಕ್ತಿ ಪ್ರತಿಷ್ಠೆಯ ಬಲ ಇದ್ದರೂ, ಯಾದವಾಡರ ಅಸಮಾಧಾನ ಹಾಗೂ ರಾಮದುರ್ಗದ ಸ್ಥಳೀಯ ರಾಜಕೀಯ ಸಮೀಕರಣಗಳು ಅವರಿಗೆ ಸವಾಲು ತರಬಹುದಾಗಿದೆ.
ರಾಜಕೀಯ ಮುನಿಸು ಮತ್ತು ಬದಲಾವಣೆ
ಬಾಲಚಂದ್ರ ಜಾರಕಿಹೊಳಿ ಹಾಗೂ ಮಹಾದೇವಪ್ಪ ಯಾದವಾಡರ ನಡುವಿನ ಅಂತರ ಈ ಚುನಾವಣೆಯ ಹಿನ್ನಲೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಸಹೋದರಿಗೆ ಅವಕಾಶ ನೀಡಲಿಲ್ಲವೆಂಬ ನೋವು ಮಹಾದೇವಪ್ಪ ಯಾದವಾಡ ಅವರಿಗೆ ಇದೆ ಎಂಬುದು ರಾಜಕೀಯ ವಲಯದ ಮಾತು. ಆದಾಗ್ಯೂ, ಇಬ್ಬರೂ ಕೂಡ ಈವರೆಗೂ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ.
ರಾಮದುರ್ಗ ತಾಲೂಕಿನ 37 ಪಿಕೆಪಿಎಸ್ ಸಹಕಾರಿ ಸಂಘಗಳು ಈ ಚುನಾವಣೆಯ ತೀರ್ಪಿಗೆ ಪ್ರಮುಖವಾಗಲಿವೆ. ಶಾಸಕ ಅಶೋಕ ಪಟ್ಟಣ ಅವರಿಗೆ ಶಾಸಕ ಸ್ಥಾನದ ಆಡಳಿತದ ಪ್ರಭಾವ, ಮಲ್ಲಣ್ಣ ಯಾದವಾಡ ಅವರಿಗೆ ಕುಟುಂಬ ಹಾಗೂ ಸ್ಥಳೀಯ ಬೆಂಬಲ, ಶ್ರೀಕಾಂತ ಢವನ್ ಅವರಿಗೆ ಬಾಲಚಂದ್ರ ಜಾರಕಿಹೊಳಿಯವರ ವ್ಯಕ್ತಿ ಪ್ರತಿಷ್ಠೆ ಈ ಮೂವರು ವಿಭಿನ್ನ ಬಲಗಳಿಂದ ಚುನಾವಣೆಯಲ್ಲಿ ಪೈಪೋಟಿ ಮಾಡುತ್ತಿದ್ದಾರೆ.
ಈ ಕುರಿತು ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ಈ ದಿನ.ಕಾಮ್ ಜತೆಗೆ ನಡೆಸಿದ ವಿಶೇಷ ಸಂವಾದದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಶ್ನೆ: ಈ ಚುನಾವಣೆ ಪಕ್ಷ ಪ್ರತಿಷ್ಠೆಗಿಂತ ವ್ಯಕ್ತಿ ಪ್ರತಿಷ್ಠೆಯಿಂದ ಕೂಡಿದೆಯೆ?
ಶಾಸಕ ಅಶೋಕ ಪಟ್ಟಣ: “ಚುನಾವಣೆಯಲ್ಲಿ ಪಕ್ಷ ಪ್ರತಿಷ್ಠೆಯೂ ಇಲ್ಲ, ವ್ಯಕ್ತಿ ಪ್ರತಿಷ್ಠೆಯೂ ಇಲ್ಲ. ತಾಲೂಕಿನ ರೈತರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಜನರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಸೋಲು–ಗೆಲುವು ಸಾಮಾನ್ಯವಾದದ್ದು, ಆದರೆ ನಾನು ನೂರಕ್ಕೆ ನೂರರಷ್ಟು ಗೆಲುವಿನ ವಿಶ್ವಾಸ ಹೊಂದಿದ್ದೇನೆ”
ಪ್ರಶ್ನೆ: ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವಿರಾ?
ಶಾಸಕರು: ಇಲ್ಲ, ನಾನು ಕೇವಲ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದೇನೆ. ಎರಡು–ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾದ ನಂತರ ಅಧ್ಯಕ್ಷರಾಗುವ ಯೋಚನೆ ಇರಬಹುದು, ಆದರೆ ನನಗೆ ಯಾವುದೂ ದುರಾಸೆ ಇಲ್ಲ.
ಪ್ರಶ್ನೆ: ನೀವು ರಮೇಶ್ ಕತ್ತಿ ಅಥವಾ ಜಾರಕಿಹೊಳಿ ಪ್ಯಾನೆಲ್‌ನಲ್ಲಿದ್ದೀರಾ?
ಶಾಸಕರು: ಇಲ್ಲ, ನಾನು ಯಾರದೇ ಪ್ಯಾನೆಲ್‌ನಲ್ಲೂ ಇಲ್ಲ. ನನ್ನದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಯಾನೆಲ್. ಅವರು ನನ್ನ ಗುರುಗಳು, ಅವರ ಮಾತು ಕೇಳುತ್ತೇನೆ.
ಪ್ರಶ್ನೆ: ಶಾಸಕರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಕಾರಣವೇನು?
ಶಾಸಕರು: ರೈತರಿಗೆ ಹೆಚ್ಚು ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಶಾಸಕರು ಸ್ಪರ್ಧಿಸುತ್ತಿದ್ದಾರೆ.
ಪ್ರಶ್ನೆ: ಉಮೇಶ ಕತ್ತಿಯವರ ಕುರಿತ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿದ್ದೀರಿ. ಅಲ್ಲಿ ಲಿಂಗಾಯತ ಸಮುದಾಯದ ನಾಯಕರು ಎಲ್ಲರೂ ಇದ್ದರು. ಈ ಚುನಾವಣೆಯಲ್ಲಿ ಅವರೊಂದಿಗೆ ಒಂದಾಗಿ ಹೋರಾಟ ಮಾಡುತ್ತಿದ್ದೀರಾ?
ಶಾಸಕರು: ಉಮೇಶ ಕತ್ತಿಯವರು ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರಿಗೆ ಗೌರವ ಸಲ್ಲಿಸಲು ಆ ಕಾರ್ಯಕ್ರಮಕ್ಕೆ ಹೋದೆ. ಅಲ್ಲಿ ಎಲ್ಲ ಪಕ್ಷದ ಮತ್ತು ಎಲ್ಲ ಸಮುದಾಯದ ನಾಯಕರು ಭಾಗವಹಿಸಿದ್ದರು. ಅದನ್ನು ರಾಜಕೀಯದ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ.
ಪ್ರಶ್ನೆ: ಶ್ರೀಕಾಂತ ಢವನ್ ಮತ್ತು ಮಲ್ಲಣ್ಣ ಯಾದವಾಡ ಅವರು ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ನಿಮ್ಮ ಪೈಪೋಟಿ ಹೇಗಿರುತ್ತದೆ?
ಶಾಸಕರು: ಹೌದು, ಅವರು ಸ್ಪರ್ಧೆ ಮಾಡಿದ್ದಾರೆ, ನಾನೂ ಸ್ಪರ್ಧೆ ಮಾಡುತ್ತಿದ್ದೇನೆ. ಜನತೆ ಯಾರ ಪರ ವೋಟ್ ಮಾಡುತ್ತಾರೆ ಎಂಬುದೇ ಅಂತಿಮ ನಿರ್ಧಾರ. ನಾನು ಜನರ ಬೆಂಬಲದಲ್ಲಿ ಗೆಲುವಿನ ವಿಶ್ವಾಸ ಹೊಂದಿದ್ದೇನೆ.
ಪ್ರಶ್ನೆ: ಗೆದ್ದರೆ ಏನೆಲ್ಲ ಬದಲಾವಣೆ ಮಾಡಲು ಬಯಸುತ್ತೀರಿ?
ಶಾಸಕರು: ಗೆದ್ದರೆ ರೈತರಿಗೆ ಹೆಚ್ಚಿನ ಸಾಲ ನೀಡುವತ್ತ ಗಮನಹರಿಸುತ್ತೇನೆ. ಜತೆಗೆ ಸಹಕಾರಿ ಸಂಘಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನೂ ಹೊಂದಿದ್ದೇನೆ.
ಅಂತಿಮ ಕ್ಷಣದ ನಿರ್ಣಾಯಕ ತಿರುವು?
ಅಕ್ಟೋಬರ್ 13ರಂದು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ. ಯಾರು ಹಿಂದೆ ಸರಿಯುತ್ತಾರೆ ಎಂಬುದು ಚುನಾವಣೆಯ ದಿಕ್ಕು ಬದಲಿಸಬಹುದಾದ ಪ್ರಮುಖ ಅಂಶ ಎಂಬುದು ರಾಜಕೀಯ ವಲಯದ ವಿಚಾರವಾಗಿದೆ.
ಕೊನೆಯ ಕ್ಷಣದಲ್ಲಿ ಬಾಲಚಂದ್ರ ಜಾರಕಿಹೊಳಿ ಯಾರೊಂದಿಗಾದರೂ ಮಾತುಕತೆ ನಡೆಸಿ ಹೊಸ ಒಪ್ಪಂದಕ್ಕೆ ಬಂದರೆ, ಸಮರದ ಚಿತ್ರಣ ಸಂಪೂರ್ಣವಾಗಿ ಬದಲಾಗಬಹುದಾಗಿದೆ.
ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಕೇವಲ ಸಹಕಾರಿ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲ. ಅದು ರಾಜಕೀಯ ಬಣಗಳ ಪ್ರಭಾವ, ನಾಯಕತ್ವದ ಪ್ರತಿಷ್ಠೆ ಮತ್ತು ಸ್ಥಳೀಯ ಸ್ವಾಭಿಮಾನದ ತೂಕದ ಪರೀಕ್ಷೆಯಾಗಿದೆ.
ಇದನ್ನೂ ಓದಿದ್ದೀರಾ? ಕಲಬುರಗಿ | ಶೀಘ್ರ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ರಾಮದುರ್ಗದ ತ್ರಿಕೋನ ಪೈಪೋಟಿ ಜಿಲ್ಲೆಯ ಮುಂದಿನ ರಾಜಕೀಯ ದಿಕ್ಕು ತೋರಿಸುವ ಸೂಚಕವಾಗಿದೆ.
ಅಶೋಕ ಪಟ್ಟಣ ಅವರ ಆಡಳಿತದ ಪ್ರಭಾವ, ಮಲ್ಲಣ್ಣ ಯಾದವಾಡ ಅವರ ಕುಟುಂಬ ಹಾಗೂ ಸ್ಥಳೀಯ ನೆಲೆಯ ಬಲ, ಮತ್ತು ಶ್ರೀಕಾಂತ ಢವನ್ ಅವರಿಗೆ ಬಾಲಚಂದ್ರ ಜಾರಕಿಹೊಳಿ ಬಣದ ರಾಜಕೀಯ ಬಲ ಈ ಮೂರರ ನಡುವೆ ನಡೆಯುತ್ತಿರುವ ಹೋರಾಟದಲ್ಲಿ ಯಾರಿಗೆ ಜನಮತದ ವಿಶ್ವಾಸ ದೊರಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಅಕ್ಟೋಬರ್ 13ರಂದು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ, ಮತ್ತು ಅಕ್ಟೋಬರ್ 19ರಂದು ನಡೆಯುವ ಮತದಾನ ಎರಡೂ ದಿನಗಳು ರಾಜಕೀಯ ತಿರುವು ತರಬಲ್ಲವು. ಈ ಚುನಾವಣೆಯ ಫಲಿತಾಂಶವು ಕೇವಲ ಡಿಸಿಸಿ ಬ್ಯಾಂಕ್‌ನ ಭವಿಷ್ಯವನ್ನಷ್ಟೇ ಅಲ್ಲ. ಬೆಳಗಾವಿ ರಾಜಕೀಯದ ಮುಂದಿನ ಅಧ್ಯಾಯವನ್ನೂ ನಿರ್ಧರಿಸಲಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




