ಬೆಳಗಾವಿ ರಿಂಗ್ ರಸ್ತೆಗಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸಿ ನೇಗಿಲ ಯೋಗಿ ರೈತ ಸೇವಾ ಸಂಘದೊಂದಿಗೆ ಸೇರಿ ನೂರಾರು ಜನ ರೈತರು ಶನಿವಾರ (ಮಾ.23) ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ರವಿ ಪಾಟೀಲ್, ಮಚ್ಚೆ-ಹಲಗಾ ಬೈಪಾಸ್ ನಿರ್ಮಾಣಕ್ಕಾಗಿ 153 ಎಕರೆ ಫಲವತ್ತಾದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಬೈಪಾಸ್ ರಸ್ತೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವುದು 2001ರಿಂದಲೇ ನಡೆಯುತ್ತಿದೆ. ನಾವು ಅದನ್ನು ಈ ಮೊದಲೇ ವಿರೋಧಿಸಿದ್ದೆವು ಎಂದರು.
ಆದರೆ, ರಸ್ತೆ ಕಾಮಗಾರಿಯನ್ನು ಮುಂದುವರೆಸಿದರು. ಈ ಭಾಗದಲ್ಲಿ ಇರುವ ರೈತರು ಒಂದು ಅಥವಾ ಎರಡು ಎಕರೆಗಿಂತ ಹೆಚ್ಚು ಭೂಮಿ ಹೊಂದಿಲ್ಲ. ಇವರೆಲ್ಲರೂ ಸಣ್ಣ ರೈತರು. ರೈತರ ಹಿತದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಬೇಕು ಎಂದರು.
ಪ್ರತಿಭಟನೆ ತಡೆಯಲು ಮುಂದಾದ ಪೊಲೀಸರ ಜೊತೆ ರೈತರು ವಾಗ್ವಾದ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರಾಜು ಮರವೆ, ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ, ರೈತರು ಇದ್ದರು.




