ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯೊಂದನ್ನು ಬೆಳಗಾವಿಯ ಸುವರ್ಣಸೌಧದ ಬಳಿ ಶನಿವಾರ ಬೆಳಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲಾರಿಗಳಲ್ಲಿ ಮದ್ಯ ತುಂಬಿಸಿ, ಅದರ ಮೇಲೆ ಫ್ಲೈವುಡ್ ಹಲಗೆಗಳನ್ನು ಜೋಡಿಸಿಕೊಂಡು, ಹಲಗೆಗಳನ್ನು ಸಾಗಿಸುವ ಹೆಸರಿನಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ದಾಳಿ ನಡೆದಿದ್ದಾರೆ. ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
“ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತು. ಹಾಗಾಗಿ, ವಾಹನಗಳ ತಪಾಸಣೆ ನಡೆಸುತ್ತಿದ್ದೆವು. ಲಾರಿಯ ಚಾಲಕನನ್ನು ವಶಕ್ಕೆ ಪಡೆದಿದ್ದೇವೆ. ಆತ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕ ವೀರೇಂದರ್ ಉತ್ತರ ಪ್ರದೇಶದ ವಾರಾಣಸಿ ಮೂಲದವನಾಗಿದ್ದಾನೆ” ಎಂದು ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಲಬ್ರೂಯಿ ಅತಿಥಿ ಗೃಹ ಕಾನ್ಸ್‌ಟಿಟ್ಯೂಷನಲ್ ಕ್ಲಬ್ : ಸರ್ಕಾರದ ನಿರ್ಧಾರಕ್ಕೆ ಬ್ರಿಜೇಶ್ ಕಾಳಪ್ಪ ಕಿಡಿ
“ಲಾರಿಯಲ್ಲಿ ಮೇಲ್ಭಾಗದ ಎರಡು ಸಾಲುಗಳಲ್ಲಿ ಫ್ಲೈವುಡ್ ಹಲಗೆಗಳಿದ್ದವು. ಅವುಗಳ ಕೆಳಗೆ ಮದ್ಯವನ್ನು ಇರಿಸಲಾಗಿತ್ತು. ನಾನಾ ಬ್ರ್ಯಾಂಡ್‌ಗಳ ಮದ್ಯದ ಬಾಟಲಿಗಳಿದ್ದು, ಅವುಗಳ ಮೌಲ್ಯವನ್ನು ಲೆಕ್ಕ ಹಾಕುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.




