ಬೆಳಗಾವಿ ತಾಲೂಕಿನ ಗೋರಮಟ್ಟಿ, ಗೋಡಿಹಳ್ಳ, ನಿಂಗೇನಟ್ಟಿ ಹಳ್ಳಿಯ ಮಕ್ಕಳಿಗಾಗಿ ಅಗಸ್ತ್ಯ ಫೌಂಡೇಷನ್ ಮತ್ತು ಕಾಲ್ಮರಿ ಸ್ಟುಡಿಯೋದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ 14, 15, 16ರಂದು ಮೂರು ದಿನಗಳ ಕಾಲ ಸಂಯೋಜಿಸಿದ ʼಪರಿಚಯ ಶಿಬಿರʼದಲ್ಲಿ ಹತ್ತಾರು ವಿಶೇಷತೆಗಳು ಕಂಡುಬಂದವು.
ಶಾಲಾ ಸಮವಸ್ತ್ರದಲ್ಲಿದ್ದ 100ಕ್ಕೂ ಹೆಚ್ಚು ಮಕ್ಕಳು ಅಂಗಳದ ಕಲ್ಲು, ಮಣ್ಣು, ಹುಲ್ಲು, ಎಲೆ, ಕಸಗಳನ್ನು ಆಯ್ದುಕೊಂಡು ಪೇಪರ್ ಮೇಲೆ ಅದ್ಭುತವಾದ ಚಿತ್ತಾರಗಳನ್ನು ಬಿಡಿಸಿದರು. ದುರ್ಬೀನು ಹಾಕಿಕೊಂಡು ಹಕ್ಕಿಗಳನ್ನು ಪರಿಚಯಿಸಿಕೊಂಡರು. ಟೆಲಿಸ್ಕೋಪಿನಿಂದ ನಕ್ಷತ್ರಗಳನ್ನು ನೋಡಿದರು. ಶನಿಗ್ರಹದ ಉಂಗುರ ಕಂಡು ನಲಿದರು. ʼಹಳ್ಳಿಗೋಗುವ ನಾವು ಹಳ್ಳಿಗೋಗುವಾʼ ಎನ್ನುತ್ತ, ಹಾಡುತ್ತ ಹಳ್ಳಿ ಬದುಕಿನ ಸತ್ವವನ್ನು ಸಂಭ್ರಮಿಸಿದರು.
ಕಲಾವಿದರಾದ ವಿಜು, ಸ್ಮೃದುಲ್ ಅವರಿಂದ ಮಣ್ಣಿನ ವಿವಿಧ ಕಲಾಕೃತಿಗಳ ತಯಾರಿ ಹಾಗೂ ಬಣ್ಣಗಳಿಂದ ಪರಿಸರದ ಅಂಶಗಳ ಚಿತ್ತಾರ, ಹೇಮಂತ್, ಸುಧಾಂಶು ಅವರ ಮಾರ್ಗದರ್ಶನದ ಪರಿಸರ ವೀಕ್ಷಣೆಯಿಂದ ಹಕ್ಕಿ, ಕೀಟ, ಹಾವುಗಳ ಪರಿಚಯ ಹಾಗೂ ಜಾಗೃತಿ, ಸಂಜೆ ಆಕಾಶ ಕಾಯಗಳ ವೀಕ್ಷಣೆ ಮತ್ತು ಛಾಯಾಚಿತ್ರದ ಮೂಲಕ ಪರಿಚಯಮಾಡಿಕೊಟ್ಟರು.

ಬಿಂದು ರಕ್ಷಿದಿ, ಸುಜಿತ್ ಕಾರ್ಕಳ, ನಾದ, ಶಶಿ ಸಾತ್’ಘಟ್ಟ ಅವರಿಂದ ರಂಗಭೂಮಿ ಚಟುವಟಿಕೆಗಳಿಂದ ಹಾಡು, ನಾಟಕ, ಆಟಗಳು, ಮುಖಕ್ಕೆ ವಿವಿಧ ಬಣ್ಣಗಾರಿಕೆ ಮೂಲಕ ಮಕ್ಕಳ ಸರ್ವತೋಮುಖ ವಿಕಸನದ ಚಟುವಟಿಕೆಗಳು ನಡೆದವು. ಕಲಾವಿದ ಶಿವರಂಜನ್ ಹಾಗೂ ಸಂಸ್ಥೆಯ ನಿರ್ದೇಶಕಿ ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ಕಡೆಯ ಸಂಪನ್ಮೂಲ ವ್ಯಕ್ತಿಗಳ ಒಗ್ಗೂಡುವಿಕೆಯಲ್ಲಿ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ : ರೈಲು ಯೋಜನೆಗಳ ಪರಿಶೀಲನೆ: ಸಂಸದ ಶೆಟ್ಟರ್ ಅಧಿಕಾರಿಗಳೊಂದಿಗೆ ಚರ್ಚೆ
ಆದಿತ್ಯ ಬಿರ್ಲಾ, ಸ್ನೇಹಾಲಯ್ ಅಹಮದಾನಗರ್, ಅಟ್ವಾಸ್ ಫೌಂಡೇಶನ್, ಪಾಲಿ ಹೈಡ್ರೋನ್ ಫೌಂಡೇಶನ್, ಎಕೆಪಿ ಫೌಂಡ್ರಿಸ್ ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಶಿಬಿರ ಆಯೋಜನೆಗೊಂಡಿತ್ತು.






