ಮನರೇಗಾ ಯೋಜನೆಯು ಕೇವಲ ಕೆಲಸವನ್ನೇ ನೀಡುವುದಿಲ್ಲ. ಗೌರವ, ಆತ್ಮಸ್ಥೈರ್ಯ ಮತ್ತು ಬದುಕಿನ ಭರವಸೆಯನ್ನು ಬಡ ಕಾರ್ಮಿಕರ ಕೈಗೆ ಒಪ್ಪಿಸುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮ ಪಂಚಾಯಿತಿಯಲ್ಲಿ ಕಂಡುಬಂದಿರುವ ಕೂಲಿ ಕಾರ್ಮಿಕರ ಸಮಸ್ಯೆಗಳು ಈ ಭರವಸೆಯನ್ನು ಹಿಮ್ಮೆಟ್ಟಿಸುತ್ತಿವೆ.
ಬಸ್ಸಾಪೂರ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸರ್ಕಾರವು ನಿಗದಿಪಡಿಸಿರುವ ಮೊತ್ತ ₹370. ಆದರೆ ಕೆಲವರಿಗೆ ₹150, ₹230 ಕೂಲಿ ನೀಡಲಾಗುತ್ತಿದೆ. ನಿಗದಿಪಡಿಸಿರುವುದರ ಹತ್ತಿರಕ್ಕೂ ಮುಟ್ಟದ ಕೂಲಿ ನೋಡಿ ಬಡವರ ಬದುಕಿನ ಹೋರಾಟವೇ ನಿಂತುಹೋಗುತ್ತಿದೆ.
“ಗ್ರಾಮಿಣ ಭಾಗದ ಜನತೆಗೆ ಸ್ವಂತ ಊರಿನಲ್ಲಿಯೇ ಕೆಲಸ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. 2025 ಏಪ್ರಿಲ್ 1 ರಿಂದ ₹370 ಕೂಲಿ ನಿಗದಿಪಡಿಸಲಾಗಿದೆ. ಆದರೆ ಬಸ್ಸಾಪೂರ ಗ್ರಾಮ ಪಂಚಾಯಿತಿಯಲ್ಲಿ 18 ಜನ ಕೂಲಿ ಕಾರ್ಮಿಕರಿಗೆ ₹150, ₹230 ಹೀಗೆ ಕಡಿಮೆ ಕೂಲಿ ನೀಡಿ ವಂಚಿಸುತ್ತಿದ್ದಾರೆ. ಕೂಲಿ ಕೆಲಸದ ಸಂದರ್ಭದಲ್ಲಿ ಗಂಭೀರ ಗಾಯಗಾಳಾದರೆ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಆದರೆ ಬಸ್ಸಾಪೂರ ಗ್ರಾಮ ಪಂಚಾಯಿತಿಯಲ್ಲಿ ಶಮ್ಶಾದ್ ನಾಯ್ಕ ಎಂಬ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದ್ದು, ಇವರಿಗೆ ಪರಿಹಾರ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.
ಮನರೇಗಾ ಕೂಲಿ ಕಾರ್ಮಿಕ ಮಹಿಳೆ ಖಾಜಾಬೀ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ನನಗೆ ಗಂಡ ಇಲ್ಲ, ಮಕ್ಕಳೂ ಇಲ್ಲ. ಕೂಲಿ ಮಾಡಿ ಜೀವನ ಮಾಡಬೇಕೆಂದರೆ ಗ್ರಾಮ ಪಂಚಾಯಿತಿಯವರು ಕೆಲಸ ಮಾಡಿದರೂ ಕೂಲಿ ನೀಡದೆ ಅನ್ಯಾಯ ಮಾಡುತ್ತಿದ್ದಾರೆ, ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುವುದಿಲ್ಲ. ʼಎಂಎಲ್‌ಎ, ಎಂಪಿಗೆ ಹೇಳುತ್ತೇವೆʼ ಎನ್ನತ್ತಾರೆ. ನಾವು ಮನರೇಗಾ ಕೂಲಿ ಕೆಲಸ ಮಾಡಿಯೇ ಜೀವನ ಮಾಡಬೇಕು. ಆದರೆ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿ ನಮಗೆ ಅನ್ಯಾಯ ಮಾಡಿದ್ದಾರೆ” ಎಂದು ನೋವು ತೋಡಿಕೊಂಡಿದ್ದಾರೆ.

ಮನರೇಗಾ ಕಾರ್ಮಿಕರಾದ ಶೋಭಾ ಈ ದಿನ.ಕಾಮ್ ಜೊತೆ ಮಾತನಾಡಿ, “ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾವು ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ನೀಡುತ್ತಿಲ್ಲ, 150 ರೂಪಾಯಿ, 230 ರೂಪಾಯಿ ಕೂಲಿ ನೀಡಿ ಅನ್ಯಾಯ ಮಾಡುತ್ತಿದ್ದಾರೆ. ಆಕಸ್ಮಿಕವಾಗಿ ಒಂದು ದಿನ ಕೆಲಸಕ್ಕೆ ಹಾಜರಾಗದಿದ್ದರೆ ಒಂದು ವಾರ ಪೂರ್ತಿ ದುಡಿದ ಕೂಲಿಯನ್ನು ನೀಡದೆ ಅನ್ಯಾಯ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸವಿತಾ ಪಾಟಿಲ್ ಮಾತನಾಡಿ, “ಮನರೇಗಾ ಕೆಲಸವನ್ನು ಸರಿಯಾದ ಸಮಯಕ್ಕೆ ನೀಡುವದಿಲ್ಲ. ಇಂದು ನಾಳೆ ಎನ್ನುತ್ತ ಅಧಿಕಾರಿಗಳು ಸತಾಯಿಸುತ್ತಾರೆ. ಕೂಲಿಯನ್ನೂ ಕೂಡ ಕಡಿಮೆ ಕೊಡುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.

ಮನರೇಗಾ ಕೆಲಸದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿರುವ ಮನರೇಗಾ ಕಾರ್ಮಿಕ ಮಹಿಳೆ ಶಮ್ಶಾದ್ ನಾಯ್ಕ ಈ ದಿನ.ಕಾಮ್ ಜೊತೆ ಮಾತನಾಡಿ, “ಎರಡು ತಿಂಗಳ ಹಿಂದೆ ಮನರೇಗಾ ಕೆಲಸದ ಸಂದರ್ಭದಲ್ಲಿ ಕಾಲಿಗೆ ಗಂಭೀರ ಗಾಯವಾಗಿದೆ. ಆದರೆ ಈವರೆಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಬಂದು ಭೇಟಿ ನೀಡಿಲ್ಲ. ಪರಿಹಾರವನ್ನೂ ನೀಡಿಲ್ಲ. ಕೂಲಿ ಕೆಲಸ ಮಾಡಿ ಜೀವನ ಮಾಡುವ ಜನ ನಾವು, ಅಂಥದರಲ್ಲಿ ನಮ್ಮ ಕೂಲಿಯನ್ನೇ ಕಡಿಮೆ ಮಾಡಿದ್ದಾರೆ. ಮನೆಯಲ್ಲಿನ ಬಂಗಾರ ಮಾರಿ ಆಸ್ಪತ್ರೆಗೆ ನೀಡಿದ್ದೆವೆ. ಈವರೆಗೆ ₹2 ಲಕ್ಷಕ್ಕಿಂತ ಅಧಿಕ ಹಣ ಖರ್ಚಾಗಿದೆ. ಆದರೂ ಈವರೆಗೆ ನಮಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.
ಕಾಲಿಗೆ ಗಂಭೀರ ಗಾಯವಾದ ಕೂಲಿ ಕೆಲಸದ ಮಹಿಳೆಯನ್ನು ಭೇಟಿ ಮಾಡಿ ಪರಿಹಾರ ನೀಡದ ಅಧಿಕಾರಿಗಳ ನಿರ್ಲಕ್ಷ್ಯವೇ ಉತ್ತರವಾಗಿರುವುದು ಹೃದಯವಿದ್ರಾವಕ. ಈ ಅವ್ಯವಸ್ಥೆಯಿಂದ ಮನರೇಗಾ ಕೂಲಿ ಕಾರ್ಮಿಕರ ಬದುಕಿನ ಹೋರಾಟ ನಿಂತುಹೋಗುತ್ತಿದೆ.

ಮನರೇಗಾ ಕಾರ್ಮಿಕರ ಕೂಲಿ ಸಮಸ್ಯೆಯ ಕುರಿತು ಬಸ್ಸಾಪೂರ ಗ್ರಾಮ ಪಂಚಾಯಿತಿಯ ಪಿಡಿಒ ಅಧಿಕಾರಿ ರಾಜು ಬೆಡಸೂರಿಯವರನ್ನು ಸಂಪರ್ಕಿಸಿದಾಗ, “ಅವರು ಕೆಲಸ ಮಾಡಿದ ಅಳತೆಯ ಪ್ರಕಾರ ಕೂಲಿ ನೀಡಿದ್ದೆವೆ” ಎನ್ನುತ್ತಾರೆ.
ಒಂದು ದಿನ ಕೆಲಸಕ್ಕೆ ಹಾಜರಾಗದ ಕಾರಣ ಒಂದು ವಾರದ ಕೂಲಿಯನ್ನು ಏಕೆ ನೀಡಿಲ್ಲವೆಂಬ ಪ್ರಶ್ನೆಗೆ, “ಆ ರೀತಿಯಾಗಿ ನಾವು ಯಾರಿಗೂ ಮಾಡಿಲ್ಲವೆಂದು ಹೇಳಿದ್ದು, ಮತ್ತೊಮ್ಮೆ ಎಂಜಿನಿಯರ್ ಮತ್ತು ಅಧಿಕಾರಿಗಳ ಮೂಲಕ ಕೆಲಸವನ್ನು ಅಳತೆ ಮಾಡಿ ಸರಿ ಪಡಿಸುತ್ತೇವೆ” ಎಂದು ನುಣುಚಿಕೊಂಡರು.
ಕೂಲಿ ಕಡಿತವೋ, ಪರಿಹಾರದ ನಿರಾಕರಣೆಯೋ, ಯಾವುದೇ ಆದರೂ ಕೂಡ ಇದು ಕೇವಲ ನಿಯಮ ಉಲ್ಲಂಘನೆ ಅಲ್ಲ, ಮಾನವೀಯತೆಯ ಮೇಲಿನ ಅಪಮಾನ. ಬಸ್ಸಾಪೂರ ಗ್ರಾಮ ಪಂಚಾಯಿತಿಯ ಕೂಲಿ ಕೆಲಸ ಮಾಡುವ ಬಡ ಜನರ ಪರಿಸ್ಥಿತಿ, ಕಾರ್ಮಿಕರ ಆತ್ಮವಿಶ್ವಾಸವನ್ನು ಕುಗ್ಗಿಸುವಂತಾಗಿದೆ.
ಮನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಈ ದಿನ.ಕಾಮ್ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಬಸ್ಸಾಪೂರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಮಾತನಾಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ʼಗುಜರಾತ್ ಮಾಡೆಲ್ʼ : ಸುಳ್ಳಿನ ಸೌಧ ಕುಸಿಯುತ್ತಿದೆ, ಬಿಜೆಪಿ ಬೆತ್ತಲಾಗುತ್ತಿದೆ!
ಬಸ್ಸಾಪೂರದಲ್ಲಿ ಕಂಡುಬರುತ್ತಿರುವ ಕಾರ್ಮಿಕರ ತೊಂದರೆಗಳು ಸ್ಥಳೀಯ ಆಡಳಿತದ ದೋರಣೆಯನ್ನೇ ಪ್ರಶ್ನೆಗೊಳಿಸುತ್ತವೆ. ಪಾರದರ್ಶಕತೆ ಇಲ್ಲದ ನಿರ್ವಹಣೆ, ಹಣಕಾಸು ತಿದ್ದುಪಡಿ ಇಲ್ಲದ ಲೆಕ್ಕಾಚಾರ, ಗಾಯಗೊಂಡ ಕಾರ್ಮಿಕರ ಮೇಲಿನ ತಾತ್ಸಾರ ಇವೆಲ್ಲವನ್ನೂ ಒಟ್ಟು ಸೇರಿಸಿದಾಗ ಮನರೇಗಾ ಯೋಜನೆಯ ಧ್ಯೇಯವಾಕ್ಯಕ್ಕೆ ಮಸಿ ಬಳಿದಂತೆ ಆಗುತ್ತಿದೆ.
ಮನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಪ್ರಜೆಗಳು ಪ್ರಶ್ನಿಸಬೇಕು, ಅಧಿಕಾರಿಗಳು ಹೊಣೆ ಹೊತ್ತುಕೊಳ್ಳಬೇಕು. ಕಾರ್ಯವಿಧಾನ ಪಾರದರ್ಶಕವಾಗಬೇಕು. ಮಣ್ಣಿನಲ್ಲಿ ಬೆವರು ಸುರಿಸುವ ಕೈಗಳಿಗೆ ಕನಿಷ್ಠ ನ್ಯಾಯ ಸಿಗದಿದ್ದರೆ, ನಾವು ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟಿದ ಕಟ್ಟಡಗಳ ತಳಪಾಯಗಳೇ ಕುಸಿಯುತ್ತವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮನರೇಗಾ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಗಮನಹರಿಸಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




