ಮೌಡ್ಯದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಜಿಲ್ಲೆಯಲ್ಲಿ ಮೌಢ್ಯಾಚರಣೆ ಹೆಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ, ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಳೆಯಾಗಲೆಂದು ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿದ್ದರು. ಇದೀಗ, ಮತ್ತೊಂದು ಗ್ರಾಮದಲ್ಲಿ ದೇವರ ವಿಗ್ರಹಕ್ಕೆ ಜಲ ದಿಗ್ಬಂಧನ ಹಾಕಲಾಗಿದೆ. ಹಾಗೆ ಮಾಡುವುದರಿಂದ ಮಳೆಯಾಗುತ್ತದೆ ಎಂಬ ಮೌಢ್ಯ ಅಲ್ಲಿನ ಜನರಲ್ಲಿದೆ.
ಮುಂಗಾರು ಆರಂಭವಾಗಿದ್ದರೂ, ಮಳೆಯಾಗದ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮಸ್ಥರು ದೇವರಿಗೆ ಶಿಕ್ಷೆ ನೀಡಿದ್ದಾರೆ. ಶಿಕ್ಷೆ ಭಾಗವಾಗಿ ಸೂರ್ಯನಾರಾಯಣ ದೇವಸ್ಥಾನದಲ್ಲಿರುವ ವಿಗ್ರಹದ ಸುತ್ತ ನೀರು ತುಂಬಿಸಿ, ಜಲ ದಿಗ್ಭಂಧನ ಹಾಕಿದ್ದಾರೆ.
ದೇವರಿಗೆ ಏಳು ದಿನಗಳ ಕಾಲ ಜಲ ದಿಗ್ಬಂಧನ ಹಾಕಿದರೆ ಮಳೆಯಾಗುತ್ತದೆ ಎಂದು ಅಲ್ಲಿನ ಗ್ರಾಮಸ್ಥರು ನಂಬಿಸಿದ್ದಾರೆ. ಮಳೆ ವಿಳಂಬವಾದ ಪ್ರತಿ ವರ್ಷವೂ ಅಲ್ಲಿನ ದೇವರಿಗೆ ಜಲ ದಿಗ್ಭಂಧನ ಹಾಕಲಾಗುತ್ತದೆ. ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈಗ ಗರ್ಭಗುಡಿಯಲ್ಲಿ ನೀರು ತುಂಬಿಸಿ, ದೇವಾಲಯಕ್ಕೆ ಬೀಗ ಹಾಕಿದ್ದಾರೆ.
ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಮಳೆ ಬೀಳಬೇಕಿತ್ತು. ಆದರೆ, ಅರ್ಧ ತಿಂಗಳು ಮುಗಿದಿದ್ದರೂ ಮಳೆಯಾಗಿಲ್ಲ. ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೀರೊದಗಿಸುವ ಮಲಪ್ರಭ ನದಿಯೂ ಬತ್ತಿಹೋಗಿದೆ. ನೀರಿನ ಕೊರತೆ ಎದುರಾಗಿದೆ. ಮಳೆಗಾಗಿ ಹಲವಾರು ಗ್ರಾಮಗಳ ಜನರು ದೇವರ ಮೊರೆಹೋಗುತ್ತಿದ್ದಾರೆ.




