ಬೆಳಗಾವಿ ಜಿಲ್ಲೆಯ ಗುರ್ಲಾಪೂರದಿಂದ ಆರಂಭವಾದ ಕಬ್ಬು ಬೆಳೆಗಾರರ ಹೋರಾಟವು ಈಗ ರಾಜ್ಯಾದ್ಯಂತ ಹಬ್ಬಿದೆ. ಪ್ರತಿ ಟನ್ ಕಬ್ಬಿಗೆ ₹3300 ನಿಗದಿ ಮಾಡಿ ಸರ್ಕಾರ ಕ್ರಮ ಕೈಗೊಂಡ ಬಳಿಕ ಬೆಳಗಾವಿ ಜಿಲ್ಲೆಯ ರೈತರು ಹೋರಾಟವನ್ನು ಅಂತ್ಯಗೊಳಿಸಿದರೂ, ಕಬ್ಬು ಬೆಳೆಗಾರರ ಹಳೆಯ ಆಕ್ರೋಶ ಪೂರ್ತಿಯಾಗಿ ತಣ್ಣಗಾಗಿಲ್ಲ. ʼಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆʼ ಎನ್ನುವುದು ರೈತರ ಗಂಭೀರ ಆರೋಪವಾಗಿದೆ. ಆದರೆ, ಸರ್ಕಾರ ಇದುವರೆಗೂ ತನ್ನ ಆದೇಶವನ್ನು ಕಾರ್ಯರೂಪಕ್ಕೆ ತರಲು ತಾನೇ ವಿಫಲವಾಗಿದೆ.
ಕಬ್ಬು ಬೆಳೆಗಾರರು ಹೇಳುವಂತೆ, ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿದಾಗ ನಿಖರ ತೂಕ ದಾಖಲಾಗದ ಕಾರಣದಿಂದ ಪ್ರತಿ ಟನ್‌ಗೆ ನೂರಾರು ರೂಪಾಯಿಗಳು ನಷ್ಟವಾಗುತ್ತಿದೆ. ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರೆದಿದ್ದು, ರೈತರ ಅಸಮಾಧಾನ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆ ಸರ್ಕಾರವು 2024–25ನೇ ಸಾಲಿನ ಅಂದಾಜು ಪ್ರತಿಯ 71ನೇ ಕಂಡಿಕೆಯಲ್ಲಿ ರಾಜ್ಯದ ಪ್ರತಿಯೊಂದು ಸಕ್ಕರೆ ಕಾರ್ಖಾನೆಯ ಮುಂದೆ ಪ್ರತ್ಯೇಕ ತೂಕದ ಯಂತ್ರವನ್ನು ನಿರ್ಮಿಸುವಂತೆ ಆದೇಶಿಸಲಾಗಿದೆ. ತೂಕದ ಯಂತ್ರ ನಿರ್ಮಾಣಕ್ಕೆ ಅಗತ್ಯವಾದ ಸ್ಥಳಾವಕಾಶವನ್ನು ನೀಡಲು ಕಾರ್ಖಾನೆಗಳಿಗೆ ಸೂಚನೆ ಕೂಡ ನೀಡಲಾಗಿದೆ. ಆದರೆ ಈ ಆದೇಶ ಹೊರಬಂದರೂ ಇದುವರೆಗೆ ಯಾವುದೇ ಸಕ್ಕರೆ ಕಾರ್ಖಾನೆ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಹಾಗೂ ಯಾವ ಕಾರ್ಖಾನೆಯೂ ಸರ್ಕಾರದ ಆದೇಶದಂತೆ ತೂಕದ ಯಂತ್ರ ನಿರ್ಮಾಣ ಮಾಡಿಲ್ಲ. ಸರ್ಕಾರ ಈ ಬಗ್ಗೆ ಯಾವುದೇ ಕಠಿಣ ಕ್ರಮವನ್ನೂ ಕೈಗೊಂಡಿಲ್ಲವೆಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕೀಯ ನಾಯಕರ ಅಥವಾ ಅವರ ಆಪ್ತರ ಬಿಗಿ ಮುಷ್ಠಿಯಲ್ಲಿವೆ. ಹೀಗಾಗಿ ಕಾರ್ಖಾನೆಗಳ ಲಾಭ, ಅವರ ನಿಯಂತ್ರಣ ಮತ್ತು ಅದರ ಮೂಲಕ ಬರುತ್ತಿರುವ ರಾಜಕೀಯ ಪ್ರಭಾವವನ್ನು ಸರ್ಕಾರಗಳು ಮುಟ್ಟಲು ಹೆದರುತ್ತಿವೆ ಎನ್ನಲಾಗುತ್ತದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಈ ವಾಸ್ತವ್ಯ ಬದಲಾಗುತ್ತಿಲ್ಲ. ಒಂದು ಟನ್ ಕಬ್ಬಿಗೆ ₹3300 ನಿಗದಿ ಮಾಡುವುದರಿಂದ ರಾಜಕೀಯ ಲಾಭ ಸಿಕ್ಕರೂ, ತೂಕದಲ್ಲಿ ನಡೆಯುವ ಮೋಸವನ್ನು ನಿಲ್ಲಿಸಲು ಸರ್ಕಾರಕ್ಕೆ ಮನಸ್ಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಯಾವುದೇ ಕಾರ್ಖಾನೆ ತೂಕದ ಯಂತ್ರ ನಿರ್ಮಿಸದಿದ್ದರೂ, ಯಾರಿಗೂ ನೋಟಿಸ್ ಇಲ್ಲ, ದಂಡ ಇಲ್ಲ, ಪರವಾನಗಿ ರದ್ದು ಮಾಡುವ ಮಾತೇ ಇಲ್ಲ. ಇದು ಕೇವಲ ನಿರ್ಲಕ್ಷ್ಯವಲ್ಲ ಕಾರ್ಖಾನೆಗಳೊಂದಿಗೆ ಸರ್ಕಾರದ ರಾಜಕೀಯ ಸಮನ್ವಯದ ಸಂಕೇತ ಎನ್ನುವುದು ಕಬ್ಬು ಬೆಳೆಗಾರರ ಮಾತು.
ಈದಿನ.ಕಾಮ್ ಜತೆ ರೈತ ಹೋರಾಟಗಾರ ಬಸವನಗೌಡ ಚಿಕ್ಕನಗೌಡರ ಮಾತನಾಡಿ, “2024–25ರ ಬಜೆಟ್‌ನ 71ನೇ ಕಂಡಿಕೆಯಡಿಯಲ್ಲಿ ಪ್ರತಿಯೊಂದು ಸಕ್ಕರೆ ಕಾರ್ಖಾನೆಯ ಮುಂದೆ ಅಥವಾ ಹತ್ತಿರ ಸರ್ಕಾರಿ ತೂಕದ ಯಂತ್ರ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ರೈತರಿಗೆ ಸರ್ಕಾರ ನೀಡಿದ 6ನೇ ಗ್ಯಾರಂಟಿ ಎಂದೇ ಹೇಳಬಹುದು. ಆದರೂ ಇಲ್ಲಿಯವರೆಗೂ ಯಾವುದೇ ಕಾರ್ಖಾನೆಯಿಂದ ಉತ್ತರ ಬಂದಿಲ್ಲ. ಕಬ್ಬು ಕೊಳ್ಳುವಾಗ ಹಾಗೂ ಮಾರುವಾಗ ಪರಸ್ಪರರ ಸಮ್ಮುಖದಲ್ಲೇ ಮಾಡಬೇಕು. ಆದರೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಮಾಡುವ ಅಧಿಕಾರ ಸಂಪೂರ್ಣವಾಗಿ ಕಾರ್ಖಾನೆಯವರ ಕೈಯಲ್ಲಿದೆ. ರೈತರಿಗೆ ಮಾಹಿತಿ ನೀಡದೇ ಅವರೇ ತೂಕ ಮಾಡಿ ವಿವರಗಳನ್ನು ತಿಳಿಸುತ್ತಾರೆ. ಇದೇ ತೂಕದಲ್ಲಿ ನಡೆಯುತ್ತಿರುವ ಮೋಸದ ಮೂಲ” ಎಂದು ತಿಳಿಸಿದರು.

“ತೂಕದ ಯಂತ್ರ ನಿರ್ಮಿಸಲು ಕಾರ್ಖಾನೆಗಳು ಮುಂದೆ ಬರುತ್ತಿಲ್ಲವೆಂಬ ಸರ್ಕಾರ ಮತ್ತು ಎಪಿಎಂಸಿಯ ಹೇಳಿಕೆ ಸುಳ್ಳು ಎಂದು ಆರೋಪಿಸಿದ ಅವರು, ಬೈಲಹೊಂಗಲದ ಸೋಮೇಶ್ವರ ಕಾರ್ಖಾನೆಯ ಮುಂದೆ ತೂಕದ ಯಂತ್ರ ನಿರ್ಮಿಸಲು ಎರಡು ಎಕರೆ ಜಮೀನು ನೀಡುವುದಾಗಿ ನಾವು ಪತ್ರ ಬರೆದಿದ್ದೇವೆ. ಆದರೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಮತ್ತೆ ಸಂಪರ್ಕಿಸಿದರೂ ಪ್ರತಿಕ್ರಿಯೆ ಇಲ್ಲ. ಇದು ತುಂಬಾ ದುರ್ದೈವ” ಎಂದು ವಿಷಾದಿಸಿದರು. “ಸಚಿವ ಸಂಪುಟದಲ್ಲಿ 29 ಸಕ್ಕರೆ ಕಾರ್ಖಾನೆಗಳ ಹತ್ತಿರ ತೂಕದ ಯಂತ್ರ ನಿರ್ಮಿಸಲು ಸಕ್ಕರೆ ಸಚಿವರಿಂದ ಒಪ್ಪಿಗೆ ಪಡೆದರೂ, ಯಂತ್ರಗಳನ್ನು ಕಾರ್ಖಾನೆಗಳ ಹತ್ತಿರವಲ್ಲದೆ ಬೇರೆಡೆ ನಿರ್ಮಿಸಲಾಗಿದೆ. ಉದಾಹರಣೆಗೆ ಯರಗಟ್ಟಿ ಎಪಿಎಂಸಿಯಲ್ಲಿ ತೂಕದ ಯಂತ್ರ ನಿರ್ಮಿಸಲಾಗಿದೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳೊಂದಿಗೆ ಯಾವುದೇ ಸಂಪರ್ಕವಿಲ್ಲ. ಇದು ಸಕ್ಕರೆ ಸಚಿವ ಶಿವಾನಂದ ಪಾಟೀಲರ ಆಡಳಿತ ವೈಫಲ್ಯ” ಆಕ್ರೋಶ ವ್ಯಕ್ತಪಡಿಸಿದರು.
“ಎರಡು ಟ್ರೈಲರ್ ಕಬ್ಬಿನಲ್ಲಿ ಸುಮಾರು ಐದು ಟನ್ ನಷ್ಟು ಮೋಸವಾಗುವ ಸಾಧ್ಯತೆಗಳಿವೆ. ಇದು ಸಕ್ಕರೆ ಸಚಿವರ ಗಮನಕ್ಕೂ ಬಂದಿದೆ. ಈ ಕಾರಣಕ್ಕೆ ತೂಕದಲ್ಲಿ ಮೋಸ ಆಗುವುದನ್ನು ತಡೆಯಲು ಸಕ್ಕರೆ ಕಾರ್ಖಾನೆಗಳ ಮುಂದೆ ಅಥವಾ ಹತ್ತಿರ ತೂಕದ ಯಂತ್ರ ನಿರ್ಮಾಣ ಮಾಡಲು 2024-2025ರ ಆಯ-ವ್ಯಯ ಕಂಡಿಕೆಯಲ್ಲಿ ಆದೇಶ ಮಾಡಲಾಗಿದ್ದರೂ ಸರ್ಕಾರ ಅದನ್ನು ಸರಿಯಾಗಿ ಜಾರಿಗೆ ತರುವ ಕೆಲಸ ಮಾಡುತ್ತಿಲ್ಲ. ಎಪಿಎಂಸಿಯ ಮೂಲಕ ತೂಕ ಮತ್ತು ಇಳುವರಿಯನ್ನು ನಿರ್ಧಾರ ಮಾಡಬೇಕು. ರೈತ ಹೋರಾಟದ ಸಂದರ್ಭದಲ್ಲಿ ಕೇವಲ ಕಬ್ಬಿನ ದರದ ಕುರಿತು ಹೋರಾಟ ಮಾಡಲಾಯಿತು. ಜತೆಗೆ ತೂಕದ ಕುರಿತು ಹೋರಾಟ ಮಾಡಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕರ್ನಾಟಕದಲ್ಲಿ ಕಬ್ಬು ಬೆಳೆ, ಸಕ್ಕರೆ ಉತ್ಪಾದನೆ: ಕರ್ನಾಟಕದಲ್ಲಿ ಕಬ್ಬು ಬೆಳೆ ವಿಸ್ತೀರ್ಣ ಈ ವರ್ಷ ಮತ್ತೆ ಏರಿಕೆಯಾಗಿದೆ. ರಾಜ್ಯದ ಕೃಷಿ ಇಲಾಖೆಯ ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ, 9.87 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಸಕ್ಕರೆ ಕೈಗಾರಿಕೆ ರಾಜ್ಯದ ಪ್ರಮುಖ ಆಧಾರವಾಗಿದ್ದು, ಒಟ್ಟು 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ ಜಿಲ್ಲೆ ಕಬ್ಬು ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆ ಒಂದರಲ್ಲೇ 29 ಕಾರ್ಖಾನೆಗಳು ಇರುವುದರಿಂದ ರಾಜ್ಯದ ಸಕ್ಕರೆ ಉದ್ಯಮಕ್ಕೆ ಇದು ಕೇಂದ್ರವಾಗಿದೆ. 2024ರ ಉತ್ಪಾದನಾ ವರದಿ ಪ್ರಕಾರ, ರಾಜ್ಯದಲ್ಲಿ 5.40 ಕೋಟಿ ಟನ್ ಕಬ್ಬು ಉತ್ಪಾದನೆ ಆಗಿದ್ದು, ಅದರಿಂದ 41 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿದೆ.

ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಆಗುವ ಮೋಸವನ್ನು ತಡೆಗಟ್ಟಲು ಸರ್ಕಾರ ಯಾವ ಪಕ್ಷದ್ದೇ ಆಗಿರಲಿ, ಮೊದಲು ತೂಕದ ಯಂತ್ರಗಳ ಆದೇಶ ಜಾರಿ ಮಾಡಲೇಬೇಕು. ರೈತರ ಹೋರಾಟವನ್ನೇ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಲು ಬಳಸುವ ರಾಜಕಾರಣದ ಸಂಸ್ಕೃತಿಯನ್ನೇ ಬದಲಿಸಬೇಕು. ರಾಜ್ಯದಲ್ಲಿ ಕಾರ್ಖಾನೆ ರಾಜಕೀಯ ಅಂತ್ಯಗೊಂಡಾಗ ಮಾತ್ರ ಸರ್ಕಾರಗಳು ರೈತನ ಪರವಾಗಿ ನಿಂತಂತೆ ಆಗುತ್ತದೆ ಎನ್ನುತ್ತಾರೆ ಕಬ್ಬು ಬೆಳೆಗಾರರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!
ರೈತನು ರಾಜ್ಯದ ರಾಜಕೀಯಕ್ಕೆ ಕೇವಲ ಮತದಾರನಲ್ಲ; ಅವನೇ ಅದರ ಬೆನ್ನೆಲುಬು. ಆದರೆ ಇಂದು ಆ ಬೆನ್ನೆಲುಬಿನ ಮೇಲೆ ನಿಂತುಕೊಂಡು ಅಧಿಕಾರವನ್ನು ನಡೆಸುವವರೇ ಅವನ ತೂಕದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ 2024-25ರ ಆಯ-ವ್ಯಯ 71ರ ಕಂಡಿಕೆಯ ಆದೇಶದಂತೆ ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ಮೂಲಕ ತೂಕದ ಯಂತ್ರ ನಿರ್ಮಾಣ ಮಾಡಿ ರೈತರಿಗೆ ತೂಕದಲ್ಲಿ ಮೋಸ ಆಗುವುದನ್ನು ನಿಲ್ಲಿಸಬೇಕು ಎನ್ನುವುದು ಪ್ರತಿ ರೈತರ ಆಶಯ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




