ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗರ್ಲಾಪೂರ ಗ್ರಾಮದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳಗಾರರ ಧರಣಿ ಹೋರಾಟಕ್ಕೆ ಸಚಿವ ಎಚ್ ಕೆ ಪಾಟೀಲ ಅವರು ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ, ʼಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ನೀಡುವವರೆಗೂ ಹೋರಾಟ ಮುಂದುವರೆಯಲಿದೆʼ ಎಂದು ರೈತರು ಘೋಷಿಸಿದ್ದಾರೆ.
ಸರ್ಕಾರ ಈ ವಿಷಯವನ್ನು ಬೆಂಗಳೂರಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತದೆಂದು ಸಚಿವರು ತಿಳಿಸಿದರೂ, ರೈತರು ಆ ಹೇಳಿಕೆಗೆ ಒಪ್ಪದೆ ತಮ್ಮ ಹೋರಾಟ ಮುಂದುವರೆಸುವ ನಿರ್ಧಾರ ಪ್ರಕಟಿಸಿದರು. ʼನಮ್ಮ ಬೇಡಿಕೆ ಸ್ಪಷ್ಟವಾಗಿದ್ದು, ಪ್ರತಿ ಟನ್ ಕಬ್ಬಿಗೆ ₹3,500 ನಿಗದಿ ಮಾಡಿದಾಗ ಮಾತ್ರ ಹೋರಾಟ ನಿಲ್ಲಿಸುತ್ತೇವೆʼ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು & ಸರ್ಕಾರ, ಬೀದಿಯಲ್ಲಿ ರೈತ
ಚರ್ಚೆಯ ನಂತರ ಸಚಿವರು ಸ್ಥಳ ತೊರೆಯುವ ವೇಳೆ, ಕೋಪಗೊಂಡ ರೈತರು ಸಚಿವರ ಕಾರಿಗೆ ಅಡ್ಡಿಪಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಆಡಳಿತ ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ಹೋರಾಟಕ್ಕೆ ದಿನೇ ದಿನೆ ಬೆಂಬಲ ಹೆಚ್ಚುತ್ತಿದ್ದು, ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬರುವವರೆಗೂ ಧರಣಿ ಮುಂದುವರೆಯುವ ಸೂಚನೆ ದೊರಕಿದೆ.





