ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಪಾತ್ರಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾಹಿತಿ ನೀಡಿದ ಅವರು, “ಜಲಾನಯನ ಪ್ರದೇಶದಲ್ಲಿ 26 ಬೋಟ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟ್ಗಳನ್ನು ಕಾರವಾರದಿಂದ ತರಿಸಲಾಗುವುದು” ಎಂದು ತಿಳಿಸಿದರು.
“ಕೆಳಹಂತದಲ್ಲಿರುವ ಸೇತುವೆಗಳು ಮುಳುಗಡೆಯಾದಾಗ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ಜನರು ದಾಟದಂತೆ ಬ್ಯಾರಿಕೇಡ್ ಹಾಕಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುನಶಿಕಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀ ಮಹಮ್ಮದ್ ರೋಷನ್ ಅವರು ಭೇಟಿ ನೀಡಿ ನದಿಯ ನೀರಿನ ಮಟ್ಟ ಪರಿಶೀಲಿಸಿದರು. ನದಿ ತೀರದ ಜನರು ನದಿ ದಾಟಲು ಬಳಸುವ ದೋಣಿಯನ್ನು ಪರಿಶೀಲಿಸಿದರು ಹಾಗೂ ಮಲಪ್ರಭಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನದಿಯ ನೀರಲ್ಲಿ ಇಳಿಯದಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು pic.twitter.com/2NGQoIj4qG
— DC BELAGAVI (@deobelagavi) July 20, 2024
ಸುತಗಟ್ಟಿ ಬಳಿ ಘಟಪ್ರಭಾ ನದಿಯ ಸೇತುವೆ ಬಳಿ ನದಿಯ ಒಳಹರಿವು ಪ್ರಮಾಣ ಹಾಗೂ ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಸಂಕೇಶ್ವರ ಪಟ್ಟಣಕ್ಕೆ ತೆರಳಿ, ಸಂಭವನೀಯ ಪ್ರವಾಹದಿಂದ ಬಾಧಿತಗೆ ಒಳಗಾಗಬಹುದಾದ ಪ್ರದೇಶಗಳನ್ನು ವೀಕ್ಷಿಸಿದರು. ಕಳೆದ ಬಾರಿ ಪ್ರವಾಹ ಬಂದಾಗ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
2019ರ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಈಗಾಗಲೇ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ ಎಂದು ಹುಕ್ಕೇರಿ ತಹಶೀಲ್ದಾರ್ ಮಂಜುಳಾ ನಾಯಕ ವಿವರಿಸಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿಯ ಸೇತುವೆ ಬಳಿ ಕೃಷ್ಣಾ ನದಿಯ ಒಳಹರಿವು ವೀಕ್ಷಿಸಿದರು. ನಂತರ ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ನದಿಗಳ ಒಳ ಹರಿವಿನ ಮೇಲೆ ನಿರಂತರ ನಿಗಾ ವಹಿಸುವುದರ ಜತೆಗೆ ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೋಟ್ಗಳು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.





