ಬೆಳಗಾವಿ | ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಪಾಠವಾಗುವುದೇ ಡಿಸಿಸಿ ಬ್ಯಾಂಕ್ ಚುನಾವಣೆ?

Date:

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯು ಅಕ್ಟೋಬರ್ 19ರಂದು ನಡೆಯುತ್ತಿದ್ದು, ಈ ಬಾರಿ ಅದು ಪಕ್ಷಗಳ ನಡುವಿನ ಸ್ಪರ್ಧೆಗಿಂತ ನಾಯಕರ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಯುದ್ಧವಾಗಿ ಮಾರ್ಪಟ್ಟಿದೆ. ರಮೇಶ್ ಕತ್ತಿ, ಲಕ್ಷ್ಮಣ ಸವದಿ ಮತ್ತು ಜಾರಕಿಹೊಳಿ ಸಹೋದರರ ಬಣಗಳು ಪರಸ್ಪರ ಪ್ರತಿಷ್ಠೆಯ ಪೈಪೋಟಿಯಲ್ಲಿ ತೊಡಗಿರುವುದರಿಂದ, ರಾಜ್ಯದ ರಾಜಕೀಯ ವಲಯವೂ ಬೆಳಗಾವಿಯತ್ತ ನೋಡುವಂತೆ ಮಾಡಿದೆ.

1919ರ ಫೆಬ್ರವರಿ 10ರಂದು ಸ್ಥಾಪಿತವಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕ್ ಇಂದು ಶತಮಾನವನ್ನು ಪೂರೈಸಿ, ಜಿಲ್ಲೆಯ ಸಹಕಾರ ಚಳವಳಿಗೆ ಬೆನ್ನೆಲುಬಾಗಿ ಪರಿಣಮಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ 112 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಂಕಿನ ಅಡಿಯಲ್ಲಿ 1,249 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು(ಪಿಕೆಪಿಎಸ್) ಕಾರ್ಯನಿರ್ವಹಿಸುತ್ತಿವೆ. ₹8,000 ಕೋಟಿಗೂ ಅಧಿಕ ಠೇವಣಿಯನ್ನು ಹೊಂದಿರುವ ಈ ಬ್ಯಾಂಕ್ ₹7,894.96 ಕೋಟಿ ದುಡಿಯುವ ಬಂಡವಾಳದೊಂದಿಗೆ ಬಲಿಷ್ಠ ಸಂಸ್ಥೆಯಾಗಿದೆ.

ಸಹಕಾರಿ ಸಂಘದ ಚುನಾವಣೆಗಳಲ್ಲಿ ಪಕ್ಷತೀತವಾಗಿ ನಡೆಯುತ್ತದೆ ಎನ್ನುವುದು ನಿಜ ಸಂಗತಿ. ಆದರೆ ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಪ್ರತಿಷ್ಠೆ ಮುಖ್ಯವಾಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರೊಳಗೆ ಗೊಂದಲ ಹಾಗೂ ನಿರಾಶೆ ಮೂಡಿಸಿದೆ. ಕಳೆದ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಹೋರಾಡಿದ, ಗ್ರಾಮ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ ಕಾರ್ಯಕರ್ತರು ಇಂದು ತಮ್ಮ ನಾಯಕರು ಎದುರು ಬಣಗಳಲ್ಲಿ ನಿಂತಿರುವುದನ್ನು ನೋಡುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಚಿತ್ರವೆಂದರೆ, ಬಿಜೆಪಿಯ ಪ್ರಮುಖ ನಾಯಕರು ಹಾಗೂ ಮಾಜಿ ಜನಪ್ರತಿನಿಧಿಗಳು ಕಾಂಗ್ರೆಸ್ ನಾಯಕರೊಂದಿಗೆ ಕೈಜೋಡಿಸಿ ಬಿಜೆಪಿಯಲ್ಲಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿ ನಿರ್ದೇಶಕರನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಅದೇ ರೀತಿ, ಕಾಂಗ್ರೆಸ್‌ನ ಕೆಲ ಹಿರಿಯರು ಮತ್ತು ಸಚಿವರು ಬಿಜೆಪಿ ನಾಯಕರ ಜೊತೆಯಾಗಿ ಬಿಜೆಪಿಯ ಮಾಜಿ ಸಂಸದರು, ಶಾಸಕರುಗಳನ್ನು ಗೆಲ್ಲಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ, ಅಧ್ಯಕ್ಷರನ್ನಾಗಿ ಮಾಡಲು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಒದಗಿಸುತ್ತಿದ್ದಾರೆ.

ಇಂತಹ ರಾಜಕೀಯ ಸನ್ನಿವೇಶವು ಪಕ್ಷನಿಷ್ಠೆ, ತ್ಯಾಗ ಮತ್ತು ತತ್ವಗಳ ಆಧಾರದ ಮೇಲೆ ಬದುಕು ಕಟ್ಟಿಕೊಂಡ ಸಾಮಾನ್ಯ ಕಾರ್ಯಕರ್ತರಿಗೆ ನಿಜಕ್ಕೂ ಕಹಿ ಪಾಠವಾಗಿದೆ. ರಾಜಕೀಯದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯೇ ಮುಖ್ಯ ಎನ್ನುವ ಮನೋಭಾವನೆ ರಾಜಕಾರಣಿಗಳಲ್ಲಿ ಬೇರೂರಿರುವಾಗ, ಪಕ್ಷದ ನಿಷ್ಠೆಯ ಬೆಲೆ ಯಾರಿಗೂ ಉಳಿಯದಂತಾಗಿದೆ.

ಪಕ್ಷಕ್ಕಾಗಿ ಹೋರಾಡಿ ಬಂಧನ ಅನುಭವಿಸಿದವರು, ಕುಟುಂಬದ ಶಾಂತಿ ಕಳೆದುಕೊಂಡವರು, ಊರಿನಲ್ಲಿ ದ್ವೇಷ ಕಟ್ಟಿಕೊಂಡ ಎಲ್ಲರೂ ಇಂದು ಯೋಚಿಸುವಂತಾಗಿದೆ. ನಮ್ಮ ನಾಯಕರಿಗೆ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕಿಂತ ಸ್ವಪ್ರತಿಷ್ಠೆಯೇ ಮುಖ್ಯವೇ? ಎಂದು ಚಿಂತೆಗೀಡಾಗುವಂತೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ವೈರಿಗಳು – ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಿತ್ರರು

2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ ಜೊಲ್ಲೆ ನಡುವೆ ಕಠಿಣ ಪೈಪೋಟಿ ನಡೆದಿತ್ತು. ಈ ವೇಳೆ ಇಬ್ಬರ ನಡುವೆ ಆರೋಪ ಪ್ರತ್ಯಾರೋಪಗಳ ಮಳೆ ಸುರಿಯಿತು ಮತ್ತು ರಾಜಕೀಯ ವೇದಿಕೆಯು ವಾದ–ವಿವಾದಗಳಿಂದ ಗಮನ ಸೆಳೆದಿತ್ತು.

ಆದರೆ, ಆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದರೆ, ಜೊಲ್ಲೆ ಸೋಲಿನ ಮುಖ ಕಂಡರು. ರಾಜಕೀಯವಾಗಿ ಬದ್ಧ ವೈರಿಗಳೆಂದು ಪರಿಗಣಿಸಲ್ಪಟ್ಟಿದ್ದ ಈ ಇಬ್ಬರ ಕುಟುಂಬಗಳೂ ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಒಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಚಿವ ಸತೀಶ್ ಜಾರಕಿಹೊಳಿ ಇದೀಗ ಒಂದೇ ವೇದಿಕೆಯಲ್ಲಿ ನಿಂತು ತಮ್ಮ ಬಣದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುತ್ತಿರುವುದು ರಾಜಕೀಯದ ಬದಲಾದ ಸಮೀಕರಣಗಳ ಸಾಕ್ಷಿಯಾಗಿದೆ. ಚುನಾವಣೆಗಳಲ್ಲಿ ವಿರೋಧಿಗಳಾಗಿದ್ದವರು ಅಧಿಕಾರ ಮತ್ತು ಹಿತಾಸಕ್ತಿಗಾಗಿ ಒಂದಾಗುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವನ್ನು ಉಂಟುಮಾಡಿದೆ.

ಬಿಜೆಪಿಯ ಮಾಜಿ ಸಂಸದ ರಮೇಶ್ ಕತ್ತಿ, ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹಾಗೂ ಮಹೇಂದ್ರ ತಮ್ಮಣ್ಣವರ ಒಂದಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಲೋಕಸಭೆ, ವಿಧಾನಸಭೆ ಮಟ್ಟದಲ್ಲಿ ಪರಸ್ಪರ ವಿರೋಧಿಗಳಾಗಿದ್ದ ಈ ನಾಯಕರು ಈಗ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಈ ಚುನಾವಣೆಯ ಮೂಲಕ ಜಿಲ್ಲೆಯಲ್ಲಿ ಹೊಸ ರಾಜಕೀಯ ಬದಲಾವಣೆಗಳ ಬೀಜ ಬಿತ್ತಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶವು ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲಾ ರಾಜಕೀಯದ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಸ್ವಪ್ರತಿಷ್ಠೆಯೇ ಮುಖ್ಯವಾಗಿರುವಾಗ ರೈತರ ಹಿತಾಸಕ್ತಿ ಕಾಯುವವರು ಯಾರು?

ಜಿಲ್ಲಾ ಸಹಕಾರಿ(ಡಿಸಿಸಿ) ಬ್ಯಾಂಕ್ ಚುನಾವಣೆಯು ಈಗ ರಾಜಕೀಯ ಬಣಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ರೈತರ ಹಿತಾಸಕ್ತಿಯ ಮಾತುಗಳು ಮಾಯವಾಗಿವೆ.

ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಸಚಿವರ ಪುತ್ರರು ಸ್ಪರ್ಧೆಗಿಳಿದ ಪರಿಣಾಮ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಚುನಾವಣೆ ಪ್ರಚಾರದ ಹಂತದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ರೈತರ ಪರವಾಗಿ ಯಾರೂ ಮಾತಾಡದಿರುವುದು ವಿಷಾದನೀಯವಾಗಿದೆ.

₹5,230.74 ಕೋಟಿ ಬಡ್ಡಿರಹಿತ ಸಾಲ ವಿತರಣೆ ಮಾಡಿ, 40 ಲಕ್ಷಕ್ಕೂ ಹೆಚ್ಚು ರೈತರ ಜೀವನಕ್ಕೆ ಆಧಾರವಾಗಿರುವ ಡಿಸಿಸಿ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಬಲಾಢ್ಯ ರಾಜಕಾರಣಿಗಳ ಬಲಪ್ರದರ್ಶನದ ವೇದಿಕೆಯಾಗಿದೆ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಅಧಿಕಾರ ಯಾರಿಗೆ ಸಿಗುತ್ತದೆ ಎಂಬುದರ ಕುತೂಹಲದ ಮಧ್ಯೆ ರೈತರ ನಿಜವಾದ ಹಿತಾಸಕ್ತಿ ಕಾಪಾಡುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

ರಾಜಕೀಯ ನಾಯಕರ ವೈಯಕ್ತಿಕ ಬಲಾಬಲದ ಹೋರಾಟದಲ್ಲಿ ರೈತರ ಸಮಸ್ಯೆಗಳು, ಸಹಕಾರಿ ವಲಯದ ಅಭಿವೃದ್ಧಿ, ಸಾಲ ಬಿಡುಗಡೆ ಪ್ರಕ್ರಿಯೆ ಹಾಗೂ ಬೆಳೆವಿಮೆ ಕುರಿತ ಚರ್ಚೆಗಳು ಕಡೆಗಣನೆಯಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ರೈತರ ಹಿತಕ್ಕಾಗಿ ನಡೆಯಬೇಕಾದ ಸಹಕಾರಿ ಬ್ಯಾಂಕಿನ ಚುನಾವಣೆ ರಾಜಕೀಯ ಪ್ರಭಾವದ ಅಖಾಡವಾಗುತ್ತಿರುವುದು ಸಹಕಾರ ಚಳುವಳಿಯ ಮೂಲ ಉದ್ದೇಶವನ್ನು ಅಲುಗಾಡಿಸುವಂತಿದೆ.

ಇದನ್ನೂ ಓದಿದ್ದೀರಾ? ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ : ಮಲ್ಲಣ್ಣ ಯಾದವಾಡಗೆ ಶಾಸಕ ಅಶೋಕ ಪಟ್ಟಣ ಬೆಂಬಲ

ನಿರ್ದೇಶಕರ 16 ಸ್ಥಾನಗಳಲ್ಲಿ 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸವದತ್ತಿಯಿಂದ ವಿರುಪಾಕ್ಷ ಮಾಮನಿ, ಕಾಗವಾಡದಿಂದ ರಾಜು ಕಾಗೆ, ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ, ಸವದತ್ತಿ ಕ್ಷೇತ್ರದಿಂದ ವಿಶ್ವಾಸ ವೈದ್ಯ, ಬೆಳಗಾವಿ ಗ್ರಾಮೀಣದಿಂದ ರಾಹುಲ್ ಜಾರಕಿಹೊಳಿ, ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಖಾನಾಪುರ ಕ್ಷೇತ್ರದಿಂದ ಅರವಿಂದ ಪಾಟೀಲ ಹಾಗೂ ವಿವಿಧೋದ್ದೇಶ ಸಹಕಾರಿ ಸಂಘಗಳಿಂದ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ ನಿರ್ದೇಶಕ ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಡಿಸಿಸಿ ಬ್ಯಾಂಕ್ ಗದ್ದುಗೆ ಯಾರದಾಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಈ ಚುನಾವಣೆಯ ಫಲಿತಾಂಶದಿಂದ ಗದ್ದುಗೆ ಯಾರಿಗೆ ಸಿಗುತ್ತದೆ ಎಂಬುದು ಮುಖ್ಯವಲ್ಲ; ನಿಜವಾದ ಪಾಠವೆಂದರೆ, ಪಕ್ಷದ ನಿಷ್ಠೆ, ಕಾರ್ಯಕರ್ತರ ಪರಿಶ್ರಮವನ್ನು ಹಾಗೂ ರೈತರ ಹಿತಾಸಕ್ತಿಯನ್ನು ಗಾಳಿಗೆ ತೂರಿದೆ ಎಂಬುದನ್ನು ಎಲ್ಲರಿಗೂ ಸ್ಪಷ್ಟವಾಗಿ ತೋರಿಸುತ್ತಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...