2025ನೇ ವರ್ಷ ಬೆಳಗಾವಿ ಜಿಲ್ಲೆಗೆ ಸಿಹಿ ಕಹಿ ಅನುಭವಗಳ ವರ್ಷವಾಗಿ ಉಳಿಯಿತು. ರೈತ ಹೋರಾಟಗಳಿಂದ ಹಿಡಿದು ರಾಜಕೀಯ ಸಂಚಲನಗಳು, ಸಹಕಾರ ಕ್ಷೇತ್ರದ ಚುನಾವಣೆಗಳು, ಪ್ರಕೃತಿ ವಿಕೋಪ, ದುರ್ಘಟನೆಗಳು ಹಾಗೂ ಹೆಮ್ಮೆಯ ಕ್ಷಣಗಳು ಜಿಲ್ಲೆಯ ಜೀವನಧಾರೆಯನ್ನೇ ಸ್ಪರ್ಶಿಸಿದವು. ಕೆಲ ಘಟನೆಗಳು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾದರೆ, ಇನ್ನೂ ಕೆಲವು ರಾಷ್ಟ್ರಮಟ್ಟದಲ್ಲಿ ಬೆಳಗಾವಿಯತ್ತ ಗಮನ ಸೆಳೆಯುವಂತೆ ಮಾಡಿವೆ. ಹೋರಾಟ ದುಃಖ ಮತ್ತು ಸಾಧನೆಗಳ ನಡುವೆ ಸಾಗಿದ 2025ರ ಪ್ರಮುಖ ಘಟನೆಗಳ ಒಟ್ಟಾರೆ ಚಿತ್ರಣ ಇಲ್ಲಿದೆ.
ಕಬ್ಬು ಬೆಳೆಗಾರರ ಐತಿಹಾಸಿಕ ಹೋರಾಟ

ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ನವೆಂಬರ್ 1ರಿಂದ 8ರವರೆಗೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ಕಬ್ಬು ಬೆಳೆಗಾರರು 10 ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದರು. ಸಾವಿರಾರು ರೈತರು ಭಾಗವಹಿಸಿದ ಈ ಹೋರಾಟ ದೇಶದ ಗಮನ ಸೆಳೆಯಿತು. ಸರ್ಕಾರ ₹3,300 ದರಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಹೋರಾಟ ಅಂತ್ಯವಾಯಿತು.
ಹುಕ್ಕೇರಿ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಹಿಂಸಾತ್ಮಕ
ಕಬ್ಬು ದರ ನಿಗದಿ ವಿಚಾರವಾಗಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗೊಂಡರು. ಹಲವು ವಾಹನಗಳು ಜಖಂಗೊಂಡವು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೆಲವರನ್ನು ಬಂಧಿಸಿದರು.
ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಸಮಾವೇಶ

ಜನವರಿ 21ರಂದು ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ‘ಗಾಂಧಿ ಭಾರತ’ ಸಮಾವೇಶ ನಡೆಯಿತು. ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ನಾಯಕರು ಆಗಮಿಸಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಲಾಯಿತು. ಕೆಲ ದಿನಗಳ ಬಳಿಕ ಸಮಾವೇಶ ಪುನಃ ಆಯೋಜಿಸಲಾಯಿತು.
ಧಾರಾಕಾರ ಮಳೆಗೆ ಭಾರೀ ಹಾನಿ
ಅತಿವೃಷ್ಟಿಯಿಂದ ಜಿಲ್ಲೆಯ ಅನೇಕ ನದಿ–ಉಪನದಿಗಳು ತುಂಬಿ ಹರಿದು, ಹಲವು ಸೇತುವೆಗಳು ಜಲಾವೃತಗೊಂಡವು. ಶಾಲೆಗಳಿಗೆ ರಜೆ ಘೋಷಿಸಲಾಯಿತು. ಜನ–ಜಾನುವಾರುಗಳು ಮೃತಪಟ್ಟಿದ್ದು, ಸುಮಾರು 6 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಯಿತು.
ಜೈ ಕಿಸಾನ್ ತರಕಾರಿ ಮಾರುಕಟ್ಟೆ ಸ್ಥಳಾಂತರ
ಗಾಂಧಿನಗರದ ಬಳಿ ಕಾರ್ಯನಿರ್ವಹಿಸುತ್ತಿದ್ದ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯನ್ನು ಸರ್ಕಾರ ರದ್ದುಪಡಿಸಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿತು. ವ್ಯಾಪಾರಸ್ಥರಿಂದ ಪ್ರತಿಭಟನೆ ನಡೆದರೂ, ಮಳಿಗೆ ಭರವಸೆ ಬಳಿಕ ಪರಿಸ್ಥಿತಿ ಶಾಂತವಾಯಿತು.
ಆಪರೇಷನ್ ಸಿಂಧೂರ: ಹುಕ್ಕೇರಿ ಹೆಮ್ಮೆ

ಪಾಕಿಸ್ತಾನ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೇನಾಧಿಕಾರಿ ಸೋಫಿಯಾ ಖುರೇಷಿ ಹುಕ್ಕೇರಿ ಪಟ್ಟಣದ ಸೊಸೆಯಾಗಿದ್ದಾರೆ. ಅವರ ಪತಿ ಹುಕ್ಕೇರಿಯವರಾಗಿದ್ದು, ದಂಪತಿಗಳಿಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಇಡೀ ದೇಶದ ಗಮನ ಸೆಳೆಯಿತು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಚುನಾವಣೆ

ಸೆಪ್ಟೆಂಬರ್ 28ರಂದು ನಡೆದ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬ ಹಾಗೂ ರಮೇಶ ಕತ್ತಿ ನಡುವಿನ ಪೈಪೋಟಿ ತೀವ್ರವಾಗಿತ್ತು. ಎಲ್ಲಾ 15 ಸ್ಥಾನಗಳಲ್ಲಿ ರಮೇಶ ಕತ್ತಿ–ಎ.ಬಿ. ಪಾಟೀಲ ಅವರ ಸ್ವಾಭಿಮಾನಿ ಪ್ಯಾನಲ್ ಜಯಗಳಿಸಿತು. ಇದರಿಂದ ಜಾರಕಿಹೊಳಿ ಕುಟುಂಬಕ್ಕೆ ಹಿನ್ನಡೆ ಉಂಟಾಯಿತು.
ಮಹಾಕುಂಭ ಮೇಳ: ಬೆಳಗಾವಿ ಜಿಲ್ಲೆಯ 13 ಮಂದಿ ಸಾವು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ವೇಳೆ ಕಾಲ್ತುಳಿತ ಹಾಗೂ ರಸ್ತೆ ಅಪಘಾತಗಳಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 13 ಮಂದಿ ಭಕ್ತರು ಮೃತಪಟ್ಟರು. ಈ ದುರ್ಘಟನೆಗಳು ಜಿಲ್ಲೆಯನ್ನು ಶೋಕಮಯವನ್ನಾಗಿಸಿದವು.
ಸತೀಶ ಪಾಟೀಲ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ
ದೇವಸ್ಥಾನ ಜಾಗಕ್ಕಾಗಿ ಹೋರಾಟ ನಡೆಸುತ್ತಿದ್ದ ಗೌಂಡವಾಡ ಗ್ರಾಮದ ಸತೀಶ ಪಾಟೀಲ ಕೊಲೆ ಪ್ರಕರಣದಲ್ಲಿ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಒಂಬತ್ತು ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿತು. ಅವರಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಕೆಪಿಸಿಸಿ ಪ್ರತಿಭಟನೆಯಲ್ಲಿ ಗದ್ದಲ

ಕೆಪಿಸಿಸಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶಕ್ಕೆ ಬಿಜೆಪಿ ಕಾರ್ಯಕರ್ತರು ನುಗ್ಗಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಎಎಸ್‌ಪಿ ನಾರಾಯಣ ಭರಮನಿ ಅವರನ್ನು ವೇದಿಕೆಗೆ ಕರೆಯಿಸಿ ಗದರಿಸಿದ ಘಟನೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಯಿತು. ಬಳಿಕ ಭರಮನಿ ಅವರಿಗೆ ಬೆಳಗಾವಿ ಡಿಸಿಪಿಯಾಗಿ ಮುಂಬಡ್ತಿ ನೀಡಲಾಯಿತು.
ಲೋಂಡಾ ಗ್ರಾಮದ ಏಳು ಮಂದಿ ಜಲಸಮಾಧಿ
ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಏಳು ಮಂದಿ ಸಮುದ್ರದ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದರು.
ಬಿಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದ ಗಮನ ಸೆಳೆದಿತು

ಅಕ್ಟೋಬರ್ 18ರಂದು ನಡೆದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ, ಜೊಲ್ಲೆ, ಕತ್ತಿ ಹಾಗೂ ಸವದಿ ಕುಟುಂಬಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಜಾರಕಿಹೊಳಿ ಕುಟುಂಬ 13 ಸ್ಥಾನಗಳನ್ನು ಗೆದ್ದು ಸಹಕಾರ ಕ್ಷೇತ್ರಕ್ಕೆ ಭರ್ಜರಿ ಪ್ರವೇಶ ಮಾಡಿತು. ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ ಆಯ್ಕೆಯಾದರು.
ಶಾಲಾ ನೀರಿನ ಟ್ಯಾಂಕ್‌ಗೆ ವಿಷ
ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಹಾಕಿದ ಪರಿಣಾಮ 11 ಮಕ್ಕಳು ಅಸ್ವಸ್ಥರಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಅಧ್ಯಕ್ಷ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದರು.
ಎಂಇಎಸ್ ಪುಂಡನೊಂದಿಗೆ ಇನ್ಸ್‌ಪೆಕ್ಟರ್ ಸೆಲ್ಫಿ ವಿವಾದ
ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಣೆ ನಡೆಸುತ್ತಿದ್ದ ಎಂಇಎಸ್ ಪುಂಡನೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಸೆಲ್ಫಿ ತೆಗೆಸಿಕೊಂಡ ಘಟನೆ ವಿವಾದಕ್ಕೆ ಕಾರಣವಾಯಿತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಇನ್ಸ್‌ಪೆಕ್ಟರ್ ಅವರನ್ನು ಎತ್ತಂಗಡಿ ಮಾಡಲಾಯಿತು.
ಗೌರವ ಡಾಕ್ಟರೇಟ್ ಪ್ರದಾನ

ವಿಟಿಯು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, ಶಿವಾಜಿ ಕಾಗಣಿಕರ ಸೇರಿದಂತೆ ಹಲವು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು
ಕಾಗವಾಡ ಶಾಸಕ ರಾಜು ಕಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಹಲವು ವೇದಿಕೆಗಳಲ್ಲಿ ಧ್ವನಿ ಎತ್ತಿದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಯಿತು.
ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ನಿಧನ
ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಾಕಾಸಾಹೇಬ ಪಾಂಡುರಂಗ ಪಾಟೀಲ (70) ನಿಧನರಾದರು.
ಹುಕ್ಕೇರಿ ತಾಲೂಕಿನ ಕಣಗಲಾ ಜಿಲ್ಲಾ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು.
1999, 2004 ಮತ್ತು 2008ರಲ್ಲಿ ಮೂರು ಬಾರಿ ನಿಪ್ಪಾಣಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಕಾಕಾಸಾಹೇಬ ಪಾಟೀಲ, ನಂತರ ನಡೆದ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ವಿರುದ್ಧ ಎರಡು ಬಾರಿ ಸೋಲು ಕಂಡಿದ್ದರು.
ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕಾರು ಅಪಘಾತದಲ್ಲಿ ನಿಧನ

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕಾರು ಅಪಘಾತದಲ್ಲಿ ನಿಧನರಾದರು.
ಮೂಲತಃ ರಾಮದುರ್ಗ ತಾಲೂಕಿನವರಾದ ಮಹಾಂತೇಶ ಬೀಳಗಿ, ಕಡು ಬಡತನದಲ್ಲಿ ಬೆಳೆದು ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದರು.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ವೇಳೆ ಜನಪರ ಆಡಳಿತ, ಸರಳ ಜೀವನಶೈಲಿಯಿಂದ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ಬೆಳಗಾವಿ ಜಿಲ್ಲೆ ವಿಭಜನೆಗೆ ಮನವಿ
ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಹಾಗೂ ಅಥಣಿ ಜಿಲ್ಲೆಗಳ ರಚನೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅರಭಾವಿ ಹಾಗೂ ಮುನವಳ್ಳಿ ತಾಲೂಕು ರಚನೆಗೂ ಹೋರಾಟಗಳು ನಡೆದವು.
ಚಳಿಗಾಲ ಅಧಿವೇಶನ: 118 ಸಂಘಟನೆಗಳ ಪ್ರತಿಭಟನೆ

ಡಿಸೆಂಬರ್ 8ರಿಂದ 19ರವರೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ 118ಕ್ಕೂ ಹೆಚ್ಚು ಸಂಘಟನೆಗಳು ವಿವಿಧ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಿದವು.
ಹೋರಾಟ, ರಾಜಕೀಯ ಪೈಪೋಟಿ, ಪ್ರಕೃತಿ ವಿಕೋಪ, ದುರ್ಘಟನೆ ಹಾಗೂ ಹೆಮ್ಮೆಯ ಕ್ಷಣಗಳ ನಡುವೆ 2025ನೇ ವರ್ಷ ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿಯಿತು. ರೈತರ ಧ್ವನಿ ಸರ್ಕಾರದ ಮಟ್ಟಕ್ಕೆ ತಲುಪಿದರೆ, ಸಹಕಾರ ಹಾಗೂ ರಾಜಕೀಯ ಕ್ಷೇತ್ರದ ಬೆಳವಣಿಗೆಗಳು ಮುಂದಿನ ವರ್ಷಗಳ ರಾಜಕಾರಣದ ದಿಕ್ಕು ಸೂಚಿಸಿವೆ. ಇತ್ತ ದುರಂತಗಳು ಎಚ್ಚರಿಕೆ ನೀಡಿದರೆ, ಸಾಧನೆಗಳು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿವೆ. ಒಟ್ಟಾರೆ, 2025ನೇ ವರ್ಷ ಬೆಳಗಾವಿಗೆ ಸವಾಲು–ಸಾಧನೆಗಳ ನಡುವಿನ ವರ್ಷವಾಗಿ ನೆನಪಾಗಲಿದೆ.




