ಒಂದು ಹಳ್ಳಿ ಅಥವಾ ಪಟ್ಟಣವು ತನ್ನ ಸಾಂಸ್ಕೃತಿಕ ಸಾಧನೆಯಿಂದ ಸುತ್ತಲಿನ ನಾಡಿಗೆ, ದೇಶಕ್ಕೆ ಪ್ರಖ್ಯಾತಿಯಾಗಿರುತ್ತದೆ. ಹಾಗೆಯೇ ಪ್ರಗತಿಶೀಲ ಚಳುವಳಿಯ ನಾಯಕರಾದ ಬಸವರಾಜ ಕಟ್ಟೀಮನಿಯವರು ತಮ್ಮ ಪರಿಶುದ್ಧ ಬದುಕು ಮತ್ತು ಕ್ರಾಂತಿಕಾರಿ ಬರಹಗಳಿಂದ ಪ್ರಸಿದ್ಧರಾದರಲ್ಲದೇ, ತಮ್ಮ ಹುಟ್ಟೂರಾದ ಮಲಾಮರಡಿಯಲ್ಲಿ ನೆಲೆ ನಿಂತು “ಹಳ್ಳಿ ಕೂಡ ಕ್ರಾಂತಿಯ ಕಿಡಿಯಾಗಬಹುದು” ಎಂಬುದನ್ನು ದೇಶಕ್ಕೆ ತೋರಿಸಿದ್ದಾರೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿಯಲ್ಲಿ ಗುರುವಾರ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾದ ಬಸವರಾಜ ಕಟ್ಟೀಮನಿ ಪುಣ್ಯಸ್ಮರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಾಲ್ಯದಿಂದಲೇ ಹೋರಾಟದ ಗುಣಗಳನ್ನು ಬೆಳೆಸಿಕೊಂಡ ಕಟ್ಟೀಮನಿಯವರಿಗೆ ಪ್ರಗತಿಶೀಲ ಸಾಹಿತ್ಯ ಚಳುವಳಿ ಬರವಣಿಗೆಯ ಶಕ್ತಿ ನೀಡಿತು. ತಮ್ಮ ತವರಿನಲ್ಲೇ ನೆಲೆಸಿಕೊಂಡು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಅಸಮಾನತೆಗಳ ವಿರುದ್ಧ ಹೋರಾಡುತ್ತಲೇ ಅವರು 42 ಕಾದಂಬರಿ, 10 ಕಥಾ ಸಂಕಲನ ಸೇರಿ 66ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಸತ್ವ ಮತ್ತು ಶಕ್ತಿ ತುಂಬಿದರು,” ಎಂದು ಡಾ. ಹಿಮ್ಮಡಿ ಹೇಳಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಅಂಕಲಗಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಎನ್. ಮಾವಿನಕಟ್ಟಿ ಹೇಳಿದರು, “ಬಡತನವನ್ನೇ ಸಾಧನವಾಗಿಸಿಕೊಂಡ ಕಟ್ಟೀಮನಿಯವರು ಸ್ವಾಭಿಮಾನದಿಂದ ಬದುಕಿ ಬರಹ ಬರೆದವರು. ಅವರ ಸಾಹಿತ್ಯವನ್ನು ಯುವ ಸಮುದಾಯದ ಕಡೆಗೆ ಕೊಂಡೊಯ್ಯುವ ಪ್ರತಿಷ್ಠಾನದ ಪ್ರಯತ್ನ ಶ್ಲಾಘನೀಯ,” ಎಂದರು.
ಸ್ಥಳೀಯ ಮುಖಂಡ ಈರಪ್ಪ ಮಾಳಗಿ ಅವರು, “ಮಲಾಮರಡಿಯ ರುದ್ರಭೂಮಿಯ ಸಮೀಪ ಕಟ್ಟೀಮನಿಯವರ ಸ್ಮಾರಕ ಹಾಗೂ ಊರಿನ ದ್ವಾರದಲ್ಲಿ ಅವರ ಹೆಸರಿನ ಕಮಾನು ನಿರ್ಮಿಸಲು ಪ್ರತಿಷ್ಠಾನ ಮುಂದಾಗಬೇಕು,” ಎಂದು ಸಲಹೆ ನೀಡಿದರು.
ಆರಂಭದಲ್ಲಿ ಸಮುದಾಯ ಭವನದಲ್ಲಿರುವ ಬಸವರಾಜ ಕಟ್ಟೀಮನಿಯವರ ಪ್ರತಿಮೆಗೆ ಧಾರವಾಡದ ಪ್ರೊ. ಬಿ.ಸಿ. ಬಿರಾದಾರ್ ಹಾಗೂ ಪ್ರತಿಷ್ಠಾನದ ಸದಸ್ಯ ಎಸ್.ಜಿ. ಚಿಕ್ಕನರಗುಂದ ಮಾಲಾರ್ಪಣೆ ಮಾಡಿದರು. ಕಟ್ಟೀಮನಿಯವರ ಪುತ್ರಿಯರಾದ ಶ್ರೀಮತಿ ಮಂಜುಳಾ ಬಿರಾದಾರ್ ಮತ್ತು ಶ್ರೀಮತಿ ನೀಲಾ ಮಾಳಗಿ ದೀಪ ಬೆಳಗಿದರು.
ಕಾರ್ಯಕ್ರಮದಲ್ಲಿ ಡಾ. ಕೆ.ಆರ್. ಸಿದ್ದಗಂಗಮ್ಮ, ಶ್ರೀಮತಿ ಹಮೀದಾ ಬೇಗಂ ದೇಸಾಯಿ, ಪ್ರೊ. ಪ್ರಕಾಶ್ ಕುರಪಿ, ಬಸವರಾಜ ಮಾಳಗಿ, ಗಂಗಪ್ಪ ಮಾಳಗಿ, ನಾಗರಾಜ ಮಾಳಗಿ, ಅಪ್ಪಣ್ಣ ಕುಸ್ತಿ, ಬಸವರಾಜ ನಾವಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕವಿ ಸುರೇಶ್ ಮುದ್ದಾರ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯ ವಿಠ್ಠಲ ದಳವಾಯಿ ವಂದಿಸಿದರು.





