ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ(ಕೆಎಲ್‌ಇ) ಸಂಸ್ಥೆಯ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ ಪ್ರಭಾಕರ ಕೋರೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುಮಾರು 42 ವರ್ಷಗಳ ಕಾಲ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ Prabhakar Kore ಅವರನ್ನು ಗೌರವಾನ್ವಿತ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಅವರ ದೀರ್ಘಕಾಲದ ನಾಯಕತ್ವದಲ್ಲಿ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿತ್ತು.
46 ವರ್ಷದ ಅಮಿತ ಕೋರೆ ಅವರು 2010ರಿಂದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಸಹಕಾರ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ. ವಿವಿಧ ಸಹಕಾರಿ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿಯೂ ಅವರು ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ.
1916ರಲ್ಲಿ ಸ್ಥಾಪಿತವಾದ ಕೆಎಲ್‌ಇ ಸಂಸ್ಥೆ ದೇಶದ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದು. ಶಾಲೆಗಳು, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ 317ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ.
ಇತರ ಪದಾಧಿಕಾರಿಗಳು:
ಮಹಾಂತೇಶ ಶಿವಾನಂದ ಕೌಜಲಗಿ (ಅಧ್ಯಕ್ಷ), ಬಸವರಾಜ ಶಿವಲಿಂಗಪ್ಪ ತಟವಟಿ (ಉಪಾಧ್ಯಕ್ಷ) ಸೇರಿದಂತೆ ಹಲವರು ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಜಿ. ದೇಸಾಯಿ, ಜಂಟಿ ಕಾರ್ಯದರ್ಶಿ ಡಾ. ಎಸ್.ಎಸ್. ಜಲಾಲಪುರೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.





