ಬೆಳಗಾವಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳ ಹಂಚಿಕೆಗೆ ಸಂಬಂಧಿಸಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಎದುರಲ್ಲೇ ಎಪಿಎಂಸಿ ಹಾಗೂ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ನಡುವೆ ಜಟಾಪಟಿ ನಡೆಯಿತು.
ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡರೂ ನಮಗೆ ಸರಿಯಾಗಿ ಮಳಿಗೆಗಳನ್ನು ಹಂಚಿಕೆಯಾಗುತ್ತಿಲ್ಲ. ಭಾನುವಾರ ಮಾರುಕಟ್ಟೆಯಲ್ಲೂ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಸಚಿವರಿಗೆ ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ವ್ಯಾಪಾರಿಗಳು, ಖಾಸಗಿ ಸಗಟು ತರಕಾರಿ ಮಾರುಕಟ್ಟೆಯಿಂದ ಬಂದವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಅವರು ಮುಖ್ಯ ಮಾರುಕಟ್ಟೆಗೆ ಬಾರದ ಕಾರಣ ರೈತರಿಗೆ ತೊಂದರೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ, ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯ ಸಮಸ್ಯೆಯನ್ನು ಪರಿಶೀಲಿಸಿ, ಜಿಲ್ಲೆಯ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಯಾರೂ ಜಗಳ ಮಾಡಬಾರದು. ವ್ಯಾಪಾರ-ವಹಿವಾಟು ಸುಗಮವಾಗಿ ನಡೆಯಬೇಕು. ಇಲ್ಲಿ ಇರುವವರೆಲ್ಲ ರೈತರೇ; ರೈತರು, ವ್ಯಾಪಾರಿಗಳು ಯಾರಿಗೂ ತೊಂದರೆ ಆಗಬಾರದು. ಎಪಿಎಂಸಿಯಲ್ಲಿ ಕೊರತೆಗಳಿದ್ದರೆ ಅಗತ್ಯ ಅನುದಾನ ನೀಡಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮಗನ ಅಂತ್ಯಸಂಸ್ಕಾರ ಮಾಡಲಾಗದೆ ಪರಿತಪಿಸಿದ ತಾಯಿ: ಮನಕಲಕುವ ಘಟನೆ
ಖಾಸಗಿ ಸಗಟು ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ ಉಪ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇದೆ. ಭಾನುವಾರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರೂ ರೈತರ ಮಕ್ಕಳೇ ಎಂದು ಸಚಿವರು ಸ್ಪಷ್ಟಪಡಿಸಿದರು




