ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ಕಬ್ಬು ರೈತರ ಧರಣಿ ಪ್ರತಿಭಟನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬುಧವಾರ ಭೇಟಿ ನೀಡಿ ಬೆಂಬಲ ಘೋಷಿಸಿದರು.
ರೈತರು ಹಲವು ದಿನಗಳಿಂದ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಮಾತನಾಡಿ, “ಗುರ್ಲಾಪೂರದಲ್ಲಿ ರೈತರು ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿರಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಸ್ಪಂದಿಸದಿರುವುದು ವಿಷಾದನೀಯ. ವಿರೋಧ ಪಕ್ಷವಾಗಿ ನಾವು ರೈತರ ಪರ ನಿಲ್ಲುತ್ತೇವೆ. ಪಕ್ಷದ ಎಲ್ಲಾ ಮುಖಂಡರ ಜೊತೆ ಚರ್ಚೆ ಮಾಡಿ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಬಂದಿದ್ದೇನೆ,” ಎಂದು ಹೇಳಿದರು.
ಅವರು ಮುಂದುವರೆದು, “ಅತಿವೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರಾಗಲಿ, ಕಂದಾಯ ಸಚಿವರಾಗಲಿ, ಕೃಷಿ ಸಚಿವರಾಗಲಿ ಯಾರೂ ಆ ಭಾಗಕ್ಕೆ ಭೇಟಿ ನೀಡಿಲ್ಲ. ರೈತರು ವರ್ಷಕ್ಕೆ ಸುಮಾರು ಆರು ಮಿಲಿಯನ್ ಟನ್ ಕಬ್ಬು ಕಾರ್ಖಾನೆಗಳಿಗೆ ಒದಗಿಸುತ್ತಾರೆ. ಅದರಿಂದ ಸರ್ಕಾರಕ್ಕೆ 50ರಿಂದ 60 ಸಾವಿರ ಕೋಟಿ ಆದಾಯ ಬರುತ್ತದೆ. ಆದರೆ ಇದೇ ರೈತರು ಸಂಕಷ್ಟದಲ್ಲಿರುವಾಗ ಅವರ ಪರಿಸ್ಥಿತಿ ಕೇಳಲು ಸರ್ಕಾರ ಮುಂದೆ ಬರದಿರುವುದು ನಾಚಿಕೆಗೆ ಕಾರಣ,” ಎಂದು ಟೀಕಿಸಿದರು.





